ಬೀದರ: ಜಿಲ್ಲೆಯ ಕೆಲವೆಡೆ ತೊಗರಿ ಬೆಳೆಗೆ ಬಲೆ ಕಟ್ಟುವ ಕೀಟದ ಬಾಧೆ ಕಂಡು ಬಂದಿದ್ದು, ವೈಜ್ಞಾನಿಕವಾಗಿ ಮರುಕಾ ವಿಟ್ರೇಟಾ ಎಂದು ಕರೆಯಲ್ಪಡುವ ಈ ಕೀಟದ ಬಾಧೆಯು ಸಾಮಾನ್ಯವಾಗಿ ಡಿಸೆಂಬರ್ ಕೊನೆಯವರೆಗೆ ಕಂಡು ಬರುತ್ತದೆ. ದೀರ್ಘಾವಧಿಯ ಹಾಗೂ ಗಿಡದ ಹೂಗಳು ಗುಂಪು ಅಥವಾ ಗೊಂಚಲಾಗಿ ಬಿಡುವ ತಳಿಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಇದರ ನಿರ್ವಹಣೆಗೆ ಅಗತ್ಯ ಔಷಧೋಪಚಾರ ಕೈಗೊಳ್ಳುವಂತೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಕೆವಿಕೆ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಕ್ಷಿಪ್ರ ಸಂಚಾರ ಸಮೀಕ್ಷೆ ವೇಳೆ ಬಸವಕಲ್ಯಾಣ ತಾಲೂಕಿನ ಹಂದರಾಳ, ಕೌಡಿಯಾಳ, ಹುಮನಾಬಾದ ತಾಲೂಕಿನ ಕಪ್ಪರಗಾಂವ, ಭಾಲ್ಕಿ ತಾಲೂಕಿನ ಚಳಕಾಪುರ ಮತ್ತು ಕಟ್ಟಿ ತುಗಾಂವ, ಬೀದರ ತಾಲೂಕಿನ ಜನವಾಡ ಗ್ರಾಮಗ ಕೆಲ ರೈತರ ಹೊಲಗಳಲ್ಲಿ ಈ ರೋಗ ಬಾಧೆ ಕಂಡು ಬಂದಿದೆ. ಈ ಕೀಟದ ಬಾಧೆಯು ಮೊಗ್ಗಿನ ಹಂತದಿಂದ ಪ್ರಾರಂಭವಾಗಿ ಕಾಯಿಕಟ್ಟುವ ಹಂತದ ವರೆಗೆ ಕಾಣಿಸಿಕೊಳ್ಳುತ್ತದೆ. ಮರಿಕೀಡೆಯು ಎಲೆ ಮತ್ತು ಹೂವು ಸೇರಿಸಿ ಬಲೆ ಕಟ್ಟಿ ಒಳಗಿದ್ದು, ಹೂವು ಮೊಗ್ಗು ಹಾಗೂ ಕಾಯಿಗಳನ್ನು ತಿನ್ನುತ್ತದೆ.
ಇದರಿಂದ ಕೀಡೆಯು ನೈಸರ್ಗಿಕ ಶತ್ರುಗಳಿಗೆ ಹಾಗೂ ಕೀಟನಾಶಕಗಳಿಗೆ ಸಿಗದೇ ವೃದ್ಧಿ ಹೊಂದುವುದು. ತತ್ತಿಗಳನ್ನು ಇಡಲು ತುದಿ ಎಲೆಗಳು, ಮೊಗ್ಗುಗಳು ಬಹಳ ಪ್ರಿಯವಾಗಿದ್ದು, ಸಣ್ಣ ಕೀಡೆಗಳು ಸಾಕಷ್ಟು ಹಾನಿ ಮಾಡುವುದರಿಂದ ಹೂವು ಹಾಗೂ ಕಾಯಿ ಕಟ್ಟುವುದನ್ನು ಕಡಿಮೆ ಮಾಡುತ್ತವೆ. ಹೂವಿನಲ್ಲಿರುವ ಅಂಡಾಶಯ ನಾಶ ಮಾಡುವುದರಿಂದ ಹೂ ಉದುರುವುದು. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಮರಿಗಳನ್ನು ಕಾಣಬಹುದು. ನಂತರ ಮರಿಕೀಡೆಗಳು ಪಕ್ಕದ ಹೂವು ಹಾಗೂ ಮೊಗ್ಗುಗಳಿಗೆ ತಾವೇ ನಿರ್ಮಿಸಿದ ರೇಷ್ಮೆಯಂತಹ ದಾರದ ಮುಖಾಂತರ ಗಿಡದಿಂದ ಗಿಡಕ್ಕೆ ಹೂವು ಮತ್ತು ಮೊಗ್ಗುಗಳನ್ನು ತಿನ್ನಲು ಹರಡುತ್ತವೆ.
ಈ ಕೀಟವು ಬಲೆಯಲ್ಲಿ (ಗೂಡಿನಲ್ಲಿ) ಅವಿತುಕೊಂಡಿರುವುದರಿಂದ ಕೀಟನಾಶಕಗಳ ಸಂಪರ್ಕಕ್ಕೆ ಬರುವುದಿಲ್ಲ. ಹಾಗಾಗಿ ಧೂಪಕ ಗುಣವುಳ್ಳ ಕೀಟನಾಶಕವನ್ನು ಬಳಸುವುದರಿಂದ ಈ ಕೀಡೆಯನ್ನು ಹತೋಟಿ ಮಾಡಬಹುದಾಗಿದೆ. ಹಾಗಾಗಿ ಡೈಕ್ಲೊರ್‌ವಾಸ್ 76 ಇ.ಸಿ. 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಡಲೆ ಬೆಳೆಯು ಕೆಲವು ಕಡೆ 10ರಿಂದ 45 ದಿವಸಗಳ ಅವ ಧಿಯದ್ದಾಗಿದೆ. ಕಡಲೆಗೆ ಬೀದರ ಮತ್ತು ಬಾಲ್ಕಿ ತಾಲೂಕುಗಳಲ್ಲಿ ಕೀಟದ ಬಾಧೆ ಕಂಡು ಬಂದಿದ್ದು, ಆರ್ಥಿಕ ನಷ್ಟ ರೇಖೆ ತಲುಪಿರುವುದಿಲ್ಲ. ಆದರೂ ರೈತರು ಕೀಟದ ಇರುವಿಕೆಯನ್ನು ಗಮನಿಸಿ ಪ್ರತಿ ಗಿಡಕ್ಕೆ 2 ವ್ರೆಟ್ಟೆ ಅಥವಾ 1ಕೀಡೆ ಇದ್ದಲ್ಲಿ ತತ್ತಿ ನಾಶಕ ಕೀಟನಾಶಕಗಳಾದ 2 ಮಿ.ಲೀ. ಪ್ರೋಪೆನೊಫಾಸ್ 50 ಇ.ಸಿ ಅಥವಾ 0.6 ಗ್ರಾಂ. ಥೈಯೋಡಿಕಾರ್ಬ 75 ಡಬ್ಲೂ ಪಿ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಲು ಕೋರಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಿಂಗಾರಿ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ. ಮೊಟ್ಟೆಯಿಂದ ಮರಿ ಹುಳುಗಳು ಮೊದಲು ಎಲೆಯನ್ನು ಕೆದರಿ ತಿನ್ನುತ್ತವೆ. ಸುಮಾರು 14-28 ದಿವಸಗಳ ಅವಧಿಯ ವರೆಗೆ ಹುಳುವಿನ ಹಂತದಲ್ಲಿ ಎಲೆಯ ಮೇಲಿದ್ದು ಎಲೆಯನ್ನು ಅರ್ಧಂಬರ್ಧ ತಿಂದು ತನ್ನ ಹೆಕ್ಕೆಗಳನ್ನು ಸುಳಿಯಲ್ಲಿಯೇ ಬಿಟ್ಟಿರುವುದು ಕಂಡು ಬಂದಿರುತ್ತದೆ.
ಸಾಮಾನ್ಯವಾಗಿ ಈ ಕೀಟ ಎಲೆಯ ಮೇಲೆ ಅಂಡಾಕಾರದ ಅಥವಾ ಹರಿದ ರಂಧ್ರದ ರೀತಿಯಲ್ಲಿ ಬಾಧೆಯನ್ನು ಉಂಟು ಮಾಡುತ್ತದೆ. ಈ ಕೀಟದ ನಿರ್ವಹಣೆಗೆ ವ್ಯಾಪಕವಾಗಿ ಪೀಡೆ ಸಮೀಕ್ಷೆ ಕೈಗೊಂಡು ಕೀಟದ ಮೊಟ್ಟೆಯ ಗುಂಪು ಮತ್ತು ಮರಿ ಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಕೀಟದ ಬಾಧೆ ಕಡಿಮೆ ಇದ್ದಾಗ ಮರಿ ಹುಳುಗಳ ನಿರ್ವಹಣೆಗೆ ಬೇವಿನ ಮೂಲದ ಕೀಟನಾಶಕ ಅಜಾಡಿರಕ್ಟಿನ್ ಶೇ.5 0.5 ಎಂ.ಎಲ್ ಅಥವಾ ಜೈವಿಕ ಶಿಲೀಂಧ್ರ ಕೀಟ ನಾಶಕ ನ್ಯೂಮೋರಿಯಾ ರಿಲೇ ಶಿಲೀಂಧ್ರವನ್ನು ಎರಡು ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಕೀಟದ ತೀವ್ರತೆ ಜಾಸ್ತಿ ಆದಾಗ ಹುಳುವನ್ನು ಹತೋಟಿಯಲ್ಲಿಡಲು ಲ್ಯಾಮ್ಡಸಹಲೋಥ್ರಿನ್ 1 ಎಂ.ಎಲ್. ಅಥವಾ ಇಮಾಮೆಕ್ಟಿನ್ ಬೆಂಜೋಯಿಟ್ ಶೇ.5 ಎಸ್.ಜಿ 0.4 ಗ್ರಾಂ ಅಥವಾ ಸ್ಪೈನೋಸ್ಯಾಡ್ 45 ಎಸ್.ಸಿ. 0.3 ಎಂ.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಕುಸುಬೆಯಲ್ಲಿ ಹೇನಿನ ಬಾಧೆ ಕಂಡು ಬಂದಿದ್ದು, ಇದರ ನಿರ್ವಹಣೆಗಾಗಿ ಅಂತರವ್ಯಾಪಿ ಕೀಟನಾಶಕಗಳಾದ ಡೈಮಿಥೋಯೆಟ್ 30 ಇ.ಸಿ. 1.75 ಮಿ.ಲೀ. ಅಥವಾ ಇಮಿಡಾಕ್ಲೋಪ್ರಿಡ್ 17.5 ಎಸ್.ಎಲ್. 0.3 ಮಿ.ಲೀ. ಅಥವಾ ಅಸಿಫೇಟ್ 75 ಎಸ್.ಪಿ 1.0 ಗ್ರಾಂ ಅಥವಾ ಮೋನೊಕ್ರೊಟೊಪಾಸ್ 36 ಎಸ್.ಎಲ್. 1.0 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸಮೀಕ್ಷೆ ತಂಡದಲ್ಲಿ ಕೆವಿಕೆ ಮುಖ್ಯಸ್ಥ ಡಾ|ಸುನೀಲ ಕುಮಾರ ಎನ್. ಎಂ., ಡಾ| ಆರ್.ಎಲ್.ಜಾಧವ, ಮಾರ್ಥಂಡ ಇದ್ದರು.