Advertisement

ಟ್ರೇಡ್‌ ಮಾರ್ಕ್‌ ನೋಂದಣಿಯಿಂದ ನಕಲು ತಡೆ

07:22 PM Nov 21, 2019 | Naveen |

ಬೀದರ: ಯಾವುದೇ ವಸ್ತುಗಳಿಗೆ ಟ್ರೇಡ್‌ ಮಾರ್ಕ್‌ ಇಲ್ಲದಿರುವುದರಿಂದ ಈ ಉತ್ಪನ್ನಗಳನ್ನು ಯಾರೂ ಬೇಕಾದರೂ ನಕಲು ಮಾಡಬಹುದು, ತಯಾರಿಸಿ ಮಾರಬಹುದು. ಟ್ರೇಡ್‌ ಮಾರ್ಕ್‌ ನೋಂದಣಿ ಮಾಡುವುದರಿಂದ ಇದನ್ನು ತಡೆಯಲು ಸಾಧ್ಯವಿದೆ ಎಂದು ಬೀದರ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ ಸಲಹೆ ನೀಡಿದರು.

Advertisement

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಡಿಸಿಸಿ ಬ್ಯಾಂಕ್‌ನ ಸೌಹಾರ್ದ ತರಬೇತಿ ಕೇಂದ್ರ ಬಿದ್ರಿ ಮತ್ತು ಆಭರಣ ಕ್ಲಸ್ಟರ್‌ ಜಂಟಿಯಾಗಿ ಜಿಲ್ಲೆಯ ಉದ್ಯಮಿಗಳಿಗಾಗಿ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕಾಪಿರೈಟ್ಸ್‌ ಹಕ್ಕುಗಳು, ಟ್ರೇಡ್‌ ಮಾರ್ಕ್‌ ಪಡೆಯುವ ವಿಧಾನಗಳು, ಪೇಟೆಂಟ್‌ ಮಾಡಬೇಕಾದ ಅವಶ್ಯಕತೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕರಕುಶಲ ಕರ್ಮಿಗಳು, ಬಿದ್ರಿ ವಿನ್ಯಾಸಕಾರರು, ಆಹಾರ ಉತ್ಪನ್ನಗಳ ಮತ್ತು ಅರಳು (ಅಳ್ಳು) ತಯಾರಕರು ಸಾಕಷ್ಟು ಸಂಖ್ಯೆಯಲ್ಲಿ ವ್ಯವಹಾರ ಮಾಡುತ್ತಿದ್ದು ಹೆಸರುವಾಸಿಯಾಗಿದ್ದಾರೆ. ಆದರೆ ಅವರ ಬಳಿ ಯಾವುದೇ ಟ್ರೇಡ್‌ ಮಾರ್ಕ್‌ ಇಲ್ಲ ಎಂದರು.

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಎಡಮಲ್ಲೆ ಮಾತನಾಡಿ, ಡಿಸಿಸಿ ಬ್ಯಾಂಕು ಬೀದರಿನ ರೈತರು-ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡಲೆಂದು ಇದ್ದು ಬೀದರಿನವರು ಪೇಟೆಂಟ್‌ ಮಾಡುವ ಸಲುವಾಗಿ ಕಟ್ಟಬೇಕಿರುವ ಹಣ ಸಾಲವಾಗಿ ನೀಡಲು ಬ್ಯಾಂಕ್‌ ಸಿದ್ಧವಿದೆ. ಹೊಸ ಉತ್ಪನ್ನ ತಯಾರಿಸುವಲ್ಲಿಯೂ ಮುಂದಿವೆ. ಆದರೆ, ಅರಿವಿನ ಕೊರತೆಯಿಂದ ಯಾರೂ ತಮ್ಮ ಉತ್ಪನ್ನಗಳಿಗೆ ಪೇಟೆಂಟ್‌ ಪಡೆಯುತ್ತಿಲ್ಲ. ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ಮಾತನಾಡಿ, ಬೀದರಿನಲ್ಲಿ ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ಆಭರಣ ಕ್ಲಸ್ಟರ್‌ ರಚನೆಗಾಗಿ 3 ಕೋಟಿ ರೂ. ಯೋಜನೆ ತಯಾರಿಸಿ ಅನುಮೋದನೆಯಾಗುವ ಹಂತದಲ್ಲಿದೆ. ಆಟೋ ಕ್ಲಸ್ಟರ್‌ ಈಗಾಗಲೇ ಕಾರ್ಯಾಚರಿಸುತ್ತಿದೆ.

Advertisement

ಆಹಾರ ವಸ್ತುಗಳ ಕ್ಲಸ್ಟರ್‌ ಸ್ಥಾಪಿಸುವ ಸಲುವಾಗಿ ಯೋಜನೆ ತಯಾರಿಸಲಾಗುತ್ತಿದೆ. ಒಂದು ವರ್ಷದೊಳಗೆ ಕಾಮನ್‌ ಫೆಸಿಲಿಟಿ ಸೆಂಟರ್‌ ಕಾರ್ಯಾರಂಭವಾಲಿದೆ ಎಂದರು.

ಆಧುನಿಕ ಯಂತ್ರೋಪಕರಣ ಒಳಗೊಂಡಿರುವ ಈ ಫೆಸಿಲಿಟಿ ಸೆಂಟರ್‌ನಿಂದ ಆಭರಣ ವಿನ್ಯಾಸ ಮಾಡಿ ಮಾರುಕಟ್ಟೆ ಮಾಡಬಹುದಾಗಿದೆ. ಉದ್ಯಮಿಗಳು ತಮ್ಮ ಉದ್ಯಮದ ಬ್ರ್ಯಾಂಡ್ ಹೆಸರನ್ನು ಟ್ರೇಡ್‌ ಮಾರ್ಕ್‌ ನೋಂದಣಿ ಮಾಡುವ ಮೂಲಕ ಅದನ್ನು ಇತರರು ಬಳಸದಂತೆ ತಡೆಯಬಹುದು ಎಂದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಬಿ.ಎಸ್‌. ಜವಳಗಿ ಮಾತನಾಡಿ, ನಮಗೆ ಹಿಂದೆ ಪೇಟೆಂಟ್‌ ಪಡೆಯುವ ಅಗತ್ಯವಿರಲಿಲ್ಲ, ಆದರೆ ಈಗ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಚಟುವಟಿಕೆಯೂ ವ್ಯವಹಾರಸ್ಥರಿಂದ ನಿಯಂತ್ರಿಸಲ್ಪಡುವುದರಿಂದ ಪೇಟೆಂಟ್‌ ಅವಶ್ಯವಾಗಿದೆ ಎಂದರು.

ಬೆಂಗಳೂರಿನ ಪೇಟೆಂಟ್‌ ನಿಯಂತ್ರಕ ಕಚೇರಿ ಅಧಿಕಾರಿ ವಿವೇಕಾನಂದ ಸಾಗರ ಮತ್ತು ಸಂತೋಷ ಎಂ.ಎನ್‌ ಪೇಟೆಂಟ್‌ ಮತ್ತು ಟ್ರೇಡ್‌ ಮಾರ್ಕ್‌ ಪಡೆಯುವ ವಿಧಾನ ಅವಶ್ಯಕತೆ ಮತ್ತು ದಾಖಲೆ ಪತ್ರಗಳ ಬಗ್ಗೆ ತರಬೇತಿ ನೀಡಿದರು.

ಕೇಂದ್ರದ ಸಹಾಯಕ ನಿರ್ದೇಶಕ ನಾಗಪ್ಪರೆಡ್ಡಿ, ಉದ್ಯಮಿ ಶಫಿಯುದ್ದೀನ್‌ ಇದ್ದರು. ಕೇಂದ್ರದ ಸಹಾಯಕ ನಿರ್ದೇಶಕ ರಮೇಶ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next