Advertisement

ಭೂಮಿ ಪಡೆದು ಕೈಗಾರಿಕೆ ಮರೆತರು!

01:12 PM Aug 25, 2019 | Naveen |

ದುರ್ಯೋಧನ ಹೂಗಾರ
ಬೀದರ:
ಕೈಗಾರಿಕಾ ಇಲಾಖೆ ನಿಯಮ ಉಲ್ಲಂಘಿಸಿ ಕೈಗಾರಿಕಾ ಪ್ರದೇಶದ ಭೂಮಿಯಲ್ಲಿ ಫಂಕ್ಷನ್‌ ಹಾಲ್, ಹೋಟೆಲ್, ಬಾರ್‌ ಮತ್ತು ರೆಸ್ಟೋರೆಂಟ್ ನಿರ್ಮಿಸಿಕೊಂಡ 8 ಜನ ಭೂ ಮಾಲೀಕರಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೋಟಿಸ್‌ ಜಾರಿ ಮಾಡಲಾಗಿದೆ.

Advertisement

ಜಿಲ್ಲಾಧಿಕಾರಿ ಡಾ|ಎಚ್.ಆರ್‌. ಮಹಾದೇವ ಅವರ ಆದೇಶದ ಹಿನ್ನೆಲೆಯಲ್ಲಿ ಕೆಐಡಿಬಿ ಅಧಿಕಾರಿಗಳು ನೌಬಾದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಟಿ.ಎಚ್ ಪ್ರಕಾಶ ಪರಿಶೀಲನೆ ನಡೆಸಿದ್ದಾರೆ. ಕೈಗಾರಿಕೆ ನಡೆಸುವುದಾಗಿ ಹೇಳಿ ಭೂಮಿ ಪಡೆದ ಸ್ಥಳಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ವಿವಿಧ ಇತರೆ ಉದ್ದೇಶಕ್ಕಾಗಿ ಜಮೀನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನೋಟಿಸ್‌ ಜಾರಿ ಮಾಡಿದ್ದಾರೆ.

ಮಂಡಳಿಯಿಂದ ನಿವೇಶನ ಪಡೆದ ಮಾಲೀಕರು ಕಾರ್ಖಾನೆ ಸ್ಥಾಪಿಸಬೇಕೆಂಬ ಒಡಂಬಡಿಕೆ ಮೇರೆಗೆ ನಿವೇಶನ ನೀಡಲಾಗುತ್ತದೆ. ಆದರೆ, ಅರ್ಜಿಯಲ್ಲಿ ಎಲ್ಲಾ ನಿಯಮಗಳಿಗೆ ಒಪ್ಪಿಕೊಂಡು ನಿವೇಶನ ಪಡೆದ ಮಾಲೀಕರು ಕೈಗಾರಿಕೆ ನಡೆಸುವ ಬದಲಿಗೆ ಇತರೆ ಉದ್ಯೋಗ ನಡೆಸುತ್ತಿದ್ದಾರೆ. ಕೈಗಾರಿಕೆ ನಡೆಯಬೇಕಾದ ಸ್ಥಳದಲ್ಲಿ ಬಾರ್‌-ರೆಸ್ಟ್ರೋರೆಂಟ್, ಫಂಕ್ಷನ್‌ ಹಾಲ್ ಹಾಗೂ ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಕೆಲ ಕಡೆಗಳಲ್ಲಿ ಮಾತ್ರ ಸರ್ವೇ ಮಾಡಿ ಪಟ್ಟಿ ತಯಾರಿಸಿದ್ದಾರೆ.

ಯಾರಿಗೆ ನೋಟಿಸ್‌?: ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ನಿವೇಶನ ಪಡೆದ ಭೂ ಮಾಲೀಕರು ಕೈಗಾರಿಕಾ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನೋಟಿಸ್‌ ನೀಡಿದ್ದಾರೆ. ಸೌರಭ ದಾಲ್ ಬೇಸನ್‌ ಇಂಡಸ್ಟ್ರೀಯಲ್ ಮಾಲೀಕ ಸೋಮನಾಥ ರಾಜಪ್ಪಾ ಹೂಗಾರ್‌ (ನಿವೇಶನ ಸಂಖ್ಯೆ 49), ಆರ್ಕೆ ಹೋರ್ಡಿಂಗ್‌ ಮನಿಫೆಕ್ಚರಿಂಗ್‌ ಯೂನಿಟ್ ಪಾಲುದಾರರಾದ ರಾಮಕೃಷ್ಣ, ನಾಗರಾಜ, ಮೌನೇಶ್ವರ, ರಾಜಕಿರಾನ ಸುತಾರ (ನಿವೇಶನ ಸಂಖ್ಯೆ21), ರಾಜಕುಮಾರ ಅಗ್ರವಾಲ್ (ನಿವೇಶನ ಸಂಖ್ಯೆ 8,9, 10), ಬಾಲಾಜಿ ಮುರಮುರಾ ಇಂಡಸ್ಟ್ರೀಜ್‌ನ ರಮೇಶ ರಾಚಪ್ಪ ಹೂಗಾರ (ನಿವೇಶನ ಸಂಖ್ಯೆ 49, 51), ರಾಜೇಶ್ವರ ವಿಠಯಹ ಗುಜವಾರ (ನಿವೇಶನ ಸಂಖ್ಯೆ 20-ಇ), ಬೆಲ್ದಾಳೆ ಎಂಟರಪ್ರೈಸೆಸ್‌ ಪಾಲುದಾರ ಸಂತೋಷ ಕಾಶೀನಾಥ ಬೆಲ್ದಾಳೆ, ನೀತಾ ಶೈಲೇಂದ್ರ ಬೆಲ್ದಾಳೆ (ನಿವೇಶನ ಸಂಖ್ಯೆ 46, 47), ರಾಜೇಶ್ವರ ವಿಠಲಯಹ ಗುಜವಾರ (ನಿವೇಶನ ಸಂಖ್ಯೆ 20-ಇ), ಬಸವರಾಜ ದೇವಿದಾಸ್‌ ಅರವಿಂದ ಹೋಟೆಲ್ (ನಿವೇಶನ ಸಂಖ್ಯೆ-43-ಎ) ಇವರುಗಳಿಗೆ ಕಳೆದ ತಿಂಗಳು 17-07-2019ರಂದು ನೋಟಿಸ್‌ ನೀಡಲಾಗಿದ್ದು, ಈ ವರೆಗೆ ಯಾವುದೇ ಭೂ ಮಾಲೀಕರು ನೋಟಿಸ್‌ಗೆ ಉತ್ತರಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಕೈಗಾರಿಕಾ ಪ್ರದೇಶದ ನಿಯಮ: ಕೈಗಾರಿಕಾ ಪ್ರದೇಶದಲ್ಲಿ ಕೇವಲ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಹಂಚಿಕೆ ಮಾಡಲಾಗುತ್ತದೆ. ಭೂಮಿ ಪಡೆದ ಭೂ ಮಾಲೀಕರು ಕಡ್ಡಾಯವಾಗಿ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂಬ ನಿಯಮ ಕೂಡ ಇದೆ. 15 ವರ್ಷಗಳ ಕಾಲ ನಿರಂತರ ಕಾರ್ಖಾನೆ ನಡೆಸುವ ಮಾಲೀಕರು ಕೈಗಾರಿಕಾ ಪ್ರದೇಶದಲ್ಲಿ ಪಡೆದ ಭೂಮಿಗೆ ಹಕ್ಕುದಾರರು ಆಗುತ್ತಾರೆ. ಭೂಮಿಯ ಹಕ್ಕು ಪಡೆದುಕೊಂಡಿದ್ದರೆ ಬೇರೆ ಯಾವುದೇ ಉದ್ಯೋಗ ಅಥವಾ ಬೇರೆ ಉದ್ದೇಶಕ್ಕೆ ಭೂಮಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಂದ್‌ ಮಾಡಿಸುತ್ತೇವೆ
ಕೈಗಾರಿಕಾ ಭೂಮಿಯಲ್ಲಿ ಕಾನೂನು ಉಲ್ಲಂಘನೆ ಮಾಡಿ ಬೇರೆ ಉದ್ದೇಶಕ್ಕೆ ನಿವೇಶನ ಬಳಸುತ್ತಿರುವ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.ನೋಟಿಸ್‌ಗೆ ಸೂಕ್ತ ಉತ್ತರ ಬರದ ಸಂದರ್ಭದಲ್ಲಿ ಅವುಗಳನ್ನು ಮುಚ್ಚುವ ಕಾರ್ಯವನ್ನು ಇಲಾಖೆ ಮಾಡಲಿದೆ. ಅಲ್ಲದೆ, ಇನ್ನೂ ಕೆಲವು ಕಾರ್ಖಾನೆಗಳ ಕುರಿತು ಕೂಡ ದೂರುಗಳಿದ್ದು, ಅವುಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಟಿ.ಎಚ್. ಪ್ರಕಾಶ,
ಕೆಐಡಿಬಿ ಅಧಿಕಾರಿ ಕೆಐಡಿಬಿ ಬೀದರ
Advertisement
Advertisement

Udayavani is now on Telegram. Click here to join our channel and stay updated with the latest news.

Next