Advertisement

ಮಹಾತ್ಮರ ತ್ಯಾಗದ ಫಲ ಸ್ವಾತಂತ್ರ್ಯ

10:19 AM Aug 16, 2019 | Naveen |

ಬೀದರ: ನಮಗೆ ಸ್ವಾತಂತ್ರ್ಯ ಸುಲಭವಾಗಿ ದೊರೆತಿಲ್ಲ. ಅಸಂಖ್ಯಾತ ಜನ ದೇಶಪ್ರೇಮಿಗಳು, ಹೋರಾಟಗಾರರು, ಮಹಾನ್‌ ನಾಯಕರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ್ದಾರೆ. ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್‌. ಮಹಾದೇವ ಹೇಳಿದರು.

Advertisement

ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವರಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿಧೀಜಿ, ಲಾಲಾ ಲಜಪತರಾಯ್‌, ಬಾಲಗಂಗಾಧರ ತಿಲಕ, ಸರ್ದಾರ ವಲ್ಲಭಭಾಯಿ ಪಟೇಲ, ಜವಾಹರಲಾಲ್ ನೆಹರು, ಸುಭಾಷಚಂದ್ರ ಭೋಸ್‌, ಚಂದ್ರಶೇಖರ ಆಜಾದ್‌, ಭಗತ್‌ಸಿಂಗ್‌, ರಾಜ್‌ಗುರು, ಸುಖ್‌ದೇವ್‌, ಕಿತ್ತೂರ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಹೀಗೆ ಅನೇಕ ಮಹನಿಯರ ದೇಶಪ್ರೇಮ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ಹೋರಾಡಿದ ಅವರ ಜೀವನ ಆದರ್ಶಗಳನ್ನು ಇಂದಿನ ಯುವಪೀಳಿಗೆ ಪ್ರೇರಣೆಯಾಗಿ ಪಡೆದುಕೊಳ್ಳಬೇಕಿದೆ. ನಮ್ಮ ಸ್ವಾತಂತ್ರ್ಯ ಹೋರಾಟವು ಸಾಮ್ರಾಜ್ಯಶಾಹಿ ಹಾಗೂ ದಾಸ್ಯದ ವಿರುದ್ಧ ಸರ್ವ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಒಂದು ದೀರ್ಘ‌ಕಾಲದ ಸೈದ್ಧಾಂತಿಕ ಹೋರಾಟವಾಗಿದೆ ಎಂದು ವಿವರಿಸಿದರು.

ಭಾರತ ದೇಶವು ಇಡೀ ವಿಶ್ವದಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನ ಹೊಂದಿದ್ದು, ಶ್ರೀ ರಾಮಕೃಷ್ಣ ಪರಮಹಂಸರು, ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿಯ ಮಹತ್ವವನ್ನು ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ಸಮಾನತೆಯ ಹರಿಕಾರರಾದ ಬಸವೇಶ್ವರರು, ದಾಸ ಶ್ರೇಷ್ಠರಾದ ಪುರಂದರದಾಸರು, ಕನಕದಾಸರು, ಗೌತಮ ಬುದ್ಧ, ಗಾಂಧಿಧೀಜಿ, ಅಂಬೇಡ್ಕರ್‌ ಅತಂತಹವರು ಶಾಂತಿ, ಸ್ನೇಹ, ಸಹಬಾಳ್ವೆಗಳ ಸಂದೇಶಗಳನ್ನು ನೀಡಿದ್ದಾರೆ ಎಂದರು.

ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿರುವ ನಮ್ಮ ಸಂವಿಧಾನವು ಎಲ್ಲಾ ಜನತೆಗೆ ಸಾಮಾಜಿಕ ನ್ಯಾಯ ಮತ್ತು ಬದುಕುವ ಅವಕಾಶಗಳನ್ನು ನೀಡಬೇಕು ಎಂಬ ತತ್ವವನ್ನು ಪಾಲಿಸುತ್ತಿದ್ದು, ದೇಶದ ಎಲ್ಲ ವರ್ಗಗಳ‌ ಜನರ ಬದುಕನ್ನು ಉತ್ತಮ ಪಡಿಸುವ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವ ಆಶಯ ಹೊಂದಿದೆ. ದೀನ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಅವರ ಏಳ್ಗೆಯ ಮೂಲಕ ದೇಶದ ಏಳ್ಗೆಯನ್ನು ಕಾಣಬಯಸಿದ್ದ ಭಾರತರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಕನಸನ್ನು ನನಸಾಗಿಸಲು ನಾವೆಲ್ಲರೂ ಭಾಗಿಗಳಾಗಬೇಕು ಎಂದರು. ಬೀದರ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ್‌, ಬೀದರ ಶಾಸಕ ರಹೀಮ್‌ ಖಾನ್‌, ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ, ಎಂಎಲ್ಸಿ ರಘುನಾಥ ಮಲ್ಕಾಪೂರೆ, ಜಿಪಂ ಸಿಇಒ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ ಸೇರಿದಂತೆ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next