ಬೀದರ: ಬೀದರ ತಾಲೂಕಿನಲ್ಲಿ 500 ಎಕರೆಗೂ ಅಧಿಕ ಭೂಮಿಯಲ್ಲಿ ಅನಧಿಕೃತ ಲೇಔಟ್‌ಗಳು ತಲೆ ಎತ್ತಿದ್ದು, ಈ ಪೈಕಿ 154 ಎಕರೆ ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಅನಧಿಕೃತ ಲೇಔಟ್ ನಿರ್ಮಿಸಿರುವ ಸಂಗತಿ ಬೆಳಕಿಗೆ ಬಂದಿದೆ.
Advertisement
ಜಿಲ್ಲಾಡಳಿತ ಈಗಾಗಲೇ ಬೀದರ ತಾಲೂಕಿನ 157 ಅನಧಿಕೃತ ಲೇಔಟ್ ಗುರುತಿಸಿ ನೋಟಿಸ್ ಕೂಡ ನೀಡಿದೆ. ತಾಲೂಕಿನ ವಿವಿಧಡೆ ಕರ್ನಾಟಕ ಭೂ ಕಂದಾಯ ಕಾಯ್ದೆ ನಿಯಮ ಉಲ್ಲಂಘಿಸಿ ಕೃಷಿ ಭೂಮಿಗಳನ್ನು ಕೃಷಿಯೇತರ ಭೂಮಿಯನ್ನಾಗಿಸಿ ಪರಿವರ್ತಿಸಿ ಕಾನೂನು ಉಲ್ಲಂಘಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192-ಎ ಕಾಯ್ದೆ ಉಲ್ಲಂಘಿಸಿ ನೂರಾರು ಎಕರೆ ಪ್ರದೇಶದಲ್ಲಿ ಲೇಔಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಅನಧಿಕೃತ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಬಾರದು ಎಂದು ಈ ಹಿಂದೆಯೇ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿತ್ತು. ಅಲ್ಲದೆ, ಅನಧಿಕೃತ ಲೇಔಟ್‌ಗಳಲ್ಲಿನ ತಯಾರಿಸಿದ ಖಾತೆಗಳನ್ನು ಕೂಡ ರದ್ದು ಮಾಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ನೀಡಿದರು. ನಿವೇಶನ ಖರೀದಿಸಿದಲ್ಲಿ ಖರೀದಿದಾರರೇ ಇದಕ್ಕೆ ನೇರ ಹೊಣೆಗಾರರು ಎಂದು ಕೂಡ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Related Articles
Advertisement
ಖರೀದಿದಾರರಿಗೆ ಆತಂಕ: ವಿವಿಧ ಸರ್ವೆ ಸಂಖ್ಯೆಗಳಲ್ಲಿ ನಿವೇಶನ ಖರೀದಿಸಿದ ಸಾರ್ವಜನಿಕರು ಸದ್ಯ ಆತಂಕಕ್ಕೆ ಒಳಗಾಗಿದ್ದಾರೆ. ಕಷ್ಟ ಪಟ್ಟು ದುಡಿದ ಹಣದಿಂದ ಮನೆ ನಿರ್ಮಿಸಿಕೊಳ್ಳುವ ಕನಸ್ಸು ಈಡೇರುವುದು ಕಷ್ಟ ಸಾಧ್ಯ ಎಂದು ತಿಳಿದುಕೊಂಡ ಅವರು, ಜಿಲ್ಲಾಡಳಿತವೇ ಮುಂದಾಗಿ ನಿವೇಶನ ಖರೀದಿಗೆ ನೀಡಿದ ಹಣ ಮರಳಿಸಲು ಕ್ರಮ ವಹಿಸಬೇಕು ಎಂದು ನಿವೇಶನ ಖರೀದಿದಾರರು ಆಗ್ರಹಿಸಿದ್ದಾರೆ.
ಲೇಔಟ್‌ಗಳು ಸೃಷ್ಟಿಯಾಗಿ ನಿವೇಶನಗಳ ಖಾತೆ ನಕಲು ತಯಾರುಗುವ ಮೊದಲು ಜಿಲ್ಲಾಡಳಿತ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೂ ಮೊದಲು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದರೆ? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬಲಿಯಾಗುವಂತಾಗಿದೆ. ಮೊದಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ನಿವೇಶನ ಖರೀದಿಸಿದವರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.