Advertisement

ಆಸ್ಪತ್ರೆ ಸ್ಥಳಾಂತರ ಹುಚ್ಚರ ಹೇಳಿಕೆ: ಖೂಬಾ

10:30 AM Jun 14, 2019 | Naveen |

ಬೀದರ: ಕ್ರೀಡಾ ಸಚಿವ ರಹೀಂ ಖಾನ್‌ ಬ್ರಿಮ್ಸ್‌ ಆಸ್ಪತ್ರೆಯ ಕಳಪೆ ಕಾಮಗಾರಿ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಸ್ಪತ್ರೆ ಸ್ಥಳಾಂತರಿಸಬೇಕೆಂದು ಒತ್ತಾಯಿಸುವುದು ಹುಚ್ಚರ ಹೇಳಿಕೆಯಾಗಿದೆ. ತಮ್ಮ ಸ್ವಕ್ಷೇತ್ರದಲ್ಲೇ ಕಳಪೆ ಕಾಮಗಾರಿ ನಡೆದಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಭಗವಂತ ಖೂಬಾ ಒತ್ತಾಯಿಸಿದರು.

Advertisement

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಕಟ್ಟಡ ಕುಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಆಗಲಿ, ಬೀದರ್‌ ಶಾಸಕ ರಹೀಮ್‌ ಖಾನ್‌ ಅವರಾಗಲಿ ಈವರೆಗೆ ಭೇಟಿ ನೀಡಿಲ್ಲ. ಘಟನೆ ಬಳಿಕ ಪರಿಶೀಲನೆ ಮಾಡಿಲ್ಲ. ಇಬ್ಬರೂ ಸಚಿವರಿಗೆ ರೋಗಿಗಳ ಬಗ್ಗೆ ಕಾಳಜಿಯೂ ಇಲ್ಲವೆಂದು ಆರೋಪಿಸಿದರು. ಆಸ್ಪತ್ರೆ ಸ್ಥಳಾಂತರಿಸಬೇಕು ಎಂದಾದರೆ ಸಚಿವ ರಹೀಮ್‌ ಖಾನ್‌ ಖುದ್ದು 150 ಕೋಟಿ ಹಣವನ್ನು ಸರ್ಕಾರಕ್ಕೆ ನೀಡಲಿ ಎಂದರು.

ಸಚಿವ ರಹೀಮ್‌ ಖಾನ್‌ ಅವರ ಕ್ಷೇತ್ರದಲ್ಲಿ ಅವರ ಅವಧಿಯಲ್ಲೇ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸುವ ಹಕ್ಕು ಶಾಸಕರಿಗಿತ್ತು. ಕಳಪೆ ಎಂದು ಗೊತ್ತಾದ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕಿತ್ತು. ಆಸ್ಪತ್ರೆ ಛಾವಣಿ ಕುಸಿದ ಬಳಿಕ ನಾನು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ದಿನ ಸಚಿವರು ನಗರದಲ್ಲೇ ಇದ್ದರೂ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ದೂರಿದರು.

ಇದೀಗ ರಹೀಮ್‌ ಖಾನ್‌ ಅವರು ಆಸ್ಪತ್ರೆ ಕಟ್ಟಡ ಕಳಪೆಯಾಗಿದೆ, ಆಸ್ಪತ್ರೆ ಸ್ಥಳಾಂತರಿಸಬೇಕು. ಸೂಕ್ತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ಮಾಹಿತಿ ಪಡೆದಿದ್ದು, ಅವರು ಆಸ್ಪತ್ರೆ ಕಳಪೆ ಕಾಮಗಾರಿಯ ನೈತಿಕ ಹೊಣೆ ಹೊರಬೇಕೆಂದು ಒತ್ತಾಯಿಸಿದ್ದಾರೆ.

ಒಂದು ವಾರದ ಗಡುವು: ಮುಂದಿನ ಒಂದು ವಾರದಲ್ಲಿ ಬ್ರೀಮ್ಸ್‌ ಆಸ್ಪತ್ರೆಗೆ ವೈದ್ಯಕೀಯ ಸಚಿವ ಇ. ತುಕಾರಾಮ್‌, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಸಂಬಂಧಿಸಿದವರು ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸಬೇಕು. ಈ ಕುರಿತು ತನಿಖೆ ನಡೆಸುವ ಜತೆಗೆ ಕಾನೂನು ಕ್ರಮ ಕೈಗೊಳ್ಳುವ ಕಾರ್ಯವಾಗಬೇಕು. ತಪ್ಪಿಸ್ಥರಿಗೆ ಶಿಕ್ಷೆ ನೀಡುವಂತಾಗಬೇಕು ಎಂದು ಒತ್ತಾಯಿಸಿದ ಅವರು, ಈ ಹಿಂದೆ ವೈದ್ಯಕೀಯ ಸಚಿವರು ಜೂ.13ರಂದು ಭೇಟಿ ಮಾಡುವುದಾಗಿ ಭರವಸೆ ನೀಡಿದರು. ಆದರೆ, ಅವರು ನಗರಕ್ಕೆ ಬಂದಿಲ್ಲ. ಇದೀಗ ಬಿಜೆಪಿಯಿಂದ ಒಂದು ವಾರದ ಗಡುವು ನೀಡುತ್ತಿದ್ದು, ಮುಂದಿನ ವಾರದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಕ್ಷಮೆ ಕೇಳ್ಳೋದಿಲ್ಲ: ಆಸ್ಪತ್ರೆ ಕಟ್ಟಡ ಕುಸಿದ ಸುದ್ದಿಗಳನ್ನು ನೋಡಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಕುರಿತು ವೈದ್ಯರನ್ನು ಪ್ರಶ್ನಿಸಿದ್ದೇನೆ. ಸೂಕ್ತವಾಗಿ ಕೆಲಸ ಮಾಡದಿದ್ದರೆ ನಾಯಿ ಕೂಡ ಮೂಸುವುದಿಲ್ಲವೆಂದು ಹೇಳಿದ್ದೇನೆ. ಆದರೆ, ನಾನು ವೈದ್ಯರನ್ನು ನಾಯಿಗೆ ಹೋಲಿಸಿ ಮಾತಾಡಿಲ್ಲ. ಸಂಸದರು ಕ್ಷಮೆಯಾಚಿಸಬೇಕೆಂದು ಆಸ್ಪತ್ರೆ ವೈದ್ಯರ ಸಂಘ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದು ಗೊತ್ತಾಗಿದೆ. ನಾನು ತಪ್ಪೇ ಮಾಡಿಲ್ಲ ಯಾವ ಕಾರಣಕ್ಕೆ ಕ್ಷಮೆ ಕೇಳಬೇಕು. ವೈದ್ಯರು ರಾಜಕೀಯ ಮಾಡುತ್ತಿದ್ದು, ಭ್ರಷ್ಟಾಚಾರ ಮುಚ್ಚಿ ಹಾಕಲು ಆರೋಪ ಮಾಡುತ್ತಿದ್ದಾರೆಂದು ಖೂಬಾ ಆರೋಪಿಸಿದರು.

ಭರವಸೆ ಸುಳ್ಳು: ಕಳೆದ ಕೆಲ ದಿನಗಳ ಹಿಂದೆ ಜಿಪಂ ಸಭಾಂಗಣದಲ್ಲಿ ನಡೆದ ಬರ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 10 ಟ್ಯಾಂಕರ್‌ ಸಿದ್ಧಪಡಿಸಿಕೊಂಡು ಜನರಿಗೆ ನೀರು ಪೂರೈಸಬೇಕೆಂದು ಸೂಚಿಸಿದ್ದರು. ಆದರೆ, ಇಂದಿಗೂ ಯಾವ ತಾಲೂಕಿನಲ್ಲೂ ಹತ್ತು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಲ್ಲದೆ, ರೈತರ ಬರ ಪರಿಹಾರ, ಕಬ್ಬಿನ ಬಾಕಿ ಹಣ ಪಾವತಿಗೆ ಕ್ರಮ ವಹಿಸುವಂತೆ ತಿಳಿಸಲಾಗಿತ್ತು. ರೈತರ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ತಿಳಿಸಲಾಗಿತ್ತು. ಆದರೂ, ಸಚಿವರು ಯಾವ ಮಾತುಗಳನ್ನೂ ಈಡೇರಿಸಿಲ್ಲವೆಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೇಲ್ದಾಳೆ, ಬಾಬು ವಾಲಿ, ಮಲ್ಲಿಕಾರ್ಜುನ ಕುಂಬಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next