ಬೀದರ: ಮನುಷ್ಯನಿಗೆ ಮೊದಲು ಜ್ಞಾನ ಮುಖ್ಯವಾಗಿದ್ದು, ಆ ಜ್ಞಾನ ದಾನವು ಗುರುವಿನಿಂದಲೇ ಆಗುತ್ತದೆ ಎಂದು ಸಿದ್ದಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ನಗರದ ಸಿದ್ದಾರೂಢ ಮಠದಲ್ಲಿ ಮಂಗಳವಾರ ನಡೆದ ಗುರು ಪೂರ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಾದವನು ತನ್ನ ಜೀವನದಲ್ಲಿ ಸುಖ ಸಮೃದ್ಧಿಯನ್ನು ಸಹಜವಾಗಿ ಅನುಭವಿಸಬೇಕು ಎನ್ನುತ್ತಾನೆ. ಗುರು ಕೃಪೆ ಆದರೆ ಮಾತ್ರ ಮನುಷ್ಯ ಜೀವನ ಉದ್ಧಾರವಾಗುತ್ತದೆ. ಸದ್ಗುರುವಿನಲ್ಲಿ ನಂಬಿಕೆ ಬಹಳ ಮುಖ್ಯ. ಗುರು ಸರ್ವಜ್ಞಾನಿಯಾಗಿದ್ದು, ಅವನಲ್ಲಿ ಅಪಾರ ಶಕ್ತಿ ಅಡಗಿರುತ್ತದೆ. ಗುರುವಿನ ಅನುಗ್ರಹ ಎಲ್ಲರಿಗೂ ದೊರೆಯುವುದಿಲ್ಲ. ಆದರೆ, ಭಕ್ತಿಯಿಂದ ಮಾಡುವ ಸೇವೆಗೆ ಗುರು ಒಲಿಯುತ್ತಾನೆ ಎಂದರು. ಬೀದರ ನಗರಲ್ಲಿ ಸದ್ಗುರು ಸಿದ್ಧಾರೂಢರ ಮಠ ಇಷ್ಟು ದೊಡ್ಡದಾಗಿ ಬೆಳೆಯಲು ಗುರುವಿನಲ್ಲಿ ಇಟ್ಟಿರುವ ಭಕ್ತರ ಭಕ್ತಿಯೇ ಕಾರಣ. ಸದ್ಭಕ್ತರಾದ ತಾವೆಲ್ಲರೂ ಸಿದ್ದಾರೂಢರಲ್ಲಿ ಭಕ್ತಿಯಿಟ್ಟು ನಡೆಯಿರಿ. ನಿಮ್ಮ ಕಷ್ಟಗಳು ದೂರವಾಗುತ್ತವೆ ಎಂದು ಹೇಳಿದರು.
ಗುರು ದೇವಾಶ್ರಮದ ಗಣೇಶಾನಂದ ಮಹಾರಾಜರು ಮಾತನಾಡಿ, ಭಗವಂತ ನಮ್ಮ ಮೇಲೆ ಕೃಪೆ ಮಾಡಿದ್ದಾನೆಂದು ತಿಳಿಯುವುದು ಹೇಗೆ? ಸದ್ಗುರು ಚರಣದರ್ಶನ ಯಾರಿಗೆ ಲಭಿಸಿದೆಯೋ ಅವರಿಗೆ ಭಗವಂತನ ಕೃಪೆಯಾಗಿದೆ ಎಂದರ್ಥ. ಗುರುವಿನ ಭಕ್ತಿ ಮಾಡುವ ಮನುಷ್ಯನಿಗೆ ಕಷ್ಟ ಕಾಲದಲ್ಲಿ ಗುರು ಕೈ ಹಿಡಿಯುತ್ತಾನೆ ಎಂದು ಹೇಳಿದರು.
ಇಂಡಿಯ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಹುಟ್ಟಿದ ಮನುಷ್ಯ ಸಾಯಲೇಬೇಕು. ಯಾರು ಸದ್ಗುರುವಿನ ಕೃಪೆಗೆ ಪಾತ್ರರಾಗುತ್ತಾರೋ ಅವರು ಧನ್ಯರು. ಸದ್ಗುರು ಜನ್ಮಕೊಟ್ಟ ತಂದೆ-ತಾಯಿಗಿಂದ ಶ್ರೇಷ್ಟರು. ಭಾರತದ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಗುರುವಿಗೆ ತಲೆಬಾಗಿ ಗೌರವಿಸುವ ಪರಂಪರೆ ಇಂದಿಗೂ ಇದ್ದು, ಭಕ್ತಿ ಮಾರ್ಗದಲ್ಲಿ ಮಾತ್ರ ನೆಮ್ಮದಿ ಇದೆ ಎಂದರು.
ನಾಗಪೂರದ ಮನಿಷಾತಾಯಿ, ಮಾತಾ ಯೋಜೇಶ್ವರಿ ತಾಯಿ, ಗೋಪಾಲ ಶಾಸ್ತ್ರಿ ಆಶೀರ್ವಚನ ನೀಡಿದರು. ನಂತರ ಶ್ರೀಗಳ ಪಾದಪೂಜೆ ಜರುಗಿತು. ಬಸವಂತರಾಯ ರೇವಣಸಿದ್ದಪ್ಪ ಬಿರಾದಾರ ಅವರಿಂದ ನಾಣ್ಯಗಳಿಂದ ಶ್ರೀಗಳ ತುಲಾ ಭಾರ ಸೇವೆ ನಡೆಯಿತು. ಸುವರ್ಣ ಕಿರೀಟ ಧಾರಣೆ ಹಾಗೂ ಕನಕ ಪುಷ್ಪ ವೃಷ್ಟಿ ಮಾಡಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ, ಬಿ.ಜಿ. ಶಟಕಾರ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ಸಾವಳಗಿ, ಶರಣಪ್ಪಾ ತಿರ್ಲಾಪೂರ, ಕರಬಸಪ್ಪಾ ಮುಸ್ತಾಪೂರೆ, ಮಡಿವಾಳಪ್ಪ ಗಂಗಶೆಟ್ಟಿ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಉದಯಭಾನು ಹಲವಾಯಿ, ಡಾ| ಹಾವಗಿರಾವ್ ಮೈಲಾರೆ, ಸಹಜಾನಂದ ಕಂದಗುಳ, ಪ್ರಭು ಬೆಣ್ಣೆ, ಡಾ| ವಿ.ಎಸ್. ಪಾಟೀಲ, ರಮೇಶಕುಮಾರ ಪಾಟೀಲ, ಲಕ್ಷ್ಮಣ ಪೂಜಾರಿ, ಶ್ರೀನಾಥ ಮಸ್ಕಲೆ, ಶರಣಬಸಪ್ಪ ಪೂಜಾರಿ, ಡಾ| ಚಂದ್ರಪ್ಪ ಭತಮುರ್ಗೆ ಇದ್ದರು.