ಬೀದರ: ಗುರು ನಾನಕ ದೇವ ಅವರ 550ನೇ ಜಯಂತ್ಯುತ್ಸವದ ಅಂಗವಾಗಿ ಗುರು ನಾನಕ ಸಂಸ್ಥೆಗಳ ಅಡಿಯಲ್ಲಿ ‘ನಮ್ಮ ನಡಿಗೆ ಹಸಿರಿನೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಶನಿವಾರ ನೇಹರು ಮೈದಾನದ ಹತ್ತಿರದ ಗುರು ನಾನಕ ಪಬ್ಲಿಕ್ ಶಾಲೆಯಿಂದ ನಗರದ ಚಿಕಪೆಟ್ ವರ್ತುಲ ರಸ್ತೆಯವರೆಗೆ ಶಾಲಾ ವಿದ್ಯಾರ್ಥಿಗಳ ಜನ ಜಾಗೃತಿ ಅಭಿಯಾನ ನಡೆಯಿತು.
ಜನ ಜಾಗೃತಿ ರ್ಯಾಲಿಗೆ ಚಾಲನೆ ನೀಡಿದ ಗುರು ನಾನಕ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯೆಕ್ಷೆ ರೇಷ್ಮಾ ಕೌರ ಮಾತನಾಡಿ, ಈ ಜಾಗೃತಿ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಜಿಲ್ಲಾದ್ಯಂತ ಹಸಿರು ಕ್ರಾಂತಿಗೆ ಮಹತ್ವ ನೀಡುವ ಕಾರ್ಯ ಆಗಬೇಕಿದೆ. ಇದೊಂದು ಅಳಿಲು ಸೇವೆಯಂದು ಭಾವಿಸಿ ಗಿಡ-ಮರಗಳನ್ನು ಬೆಳೆಸುವ ಕಾರ್ಯ ಮಾಡಬೇಕಿದೆ. ಇದು ಕೇವಲ ತೋರಿಕೆಯ ಕ್ರಮವಾಗದೆ ನಾವೆಲ್ಲರೂ ಹಸಿರನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.
ಗುರು ನಾನಕ ಶಾಲೆಯಿಂದ ಆರಂಭಗೊಂಡ ರ್ಯಾಲಿ ರೋಟರಿ ಕ್ಲಬ್, ಗುದಗೆ ಆಸ್ಪತ್ರೆ, ಮೋಹನ್ ಮಾರ್ಕೇಟ್, ಅಂಬೆಡ್ಕರ್ ಸರ್ಕಲ್ ಮೂಲಕ ಜನವಾಡಾ ರಸ್ತೆ ಮಾರ್ಗವಾಗಿ ಚಿಕ್‌ಪೆಟ್ ಹತ್ತಿರ ವರ್ತುಲ ರಸ್ತೆ ಪಕ್ಕ ನಿರ್ಮಿಸಿದ ಸಮಾವೇಶದಲ್ಲಿ ಕೊನೆಗೊಂಡಿತು. ಸಮಾರೂಪ ಸಮಾರಂಭದಲ್ಲಿ ಭಾಗವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ ಟಿ.ಪಿ. ಮಾತನಾಡಿ, ಯಾಂತ್ರಿಕ ಜೀವನ ಕ್ರಮ, ವಾಹನಗಳ ಹೊಗೆಯಿಂದ ಉಸಿರು ಗಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯ ತನ್ನ ಸ್ವರ್ಥಕ್ಕಾಗಿ ಗಿಡಮರಗಳನ್ನು ತುಂಡರಿಸಿ ಇಂತಹ ಅನಾಹುತಕ್ಕೆ ಎಡೆ ಮಾಡುತ್ತಿದ್ದಾನೆ. ಮುಂದಿನ ಪೀಳಿಗೆ ಸ್ವಚ್ಛ ಪರಿಸರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಒದಗಿಬರಬಹುದು. ಇದಕ್ಕೆ ಏಕೈಕ ಉಪಾಯವೆಂದರೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ‘ತಲೆಗೊಂದು ಮರ, ಊರಿಗೊಂದು ವನ’ ಎಂಬುದನ್ನು ಸಾರಬೇಕಿದೆ. ಈ ಮೂಲಕ ಮುಂದಿನ ಮಕ್ಕಳಿಗೆ ಉತ್ತಮ ಪರಿಸರ ನೀಡುವ ಕಾರ್ಯವನ್ನು ನಾವುಗಳು ಮಾಡಬೇಕು ಎಂದರು.
ನಾನಕ ಝಿರಾ ಸಾಹೇಬ್ ಫೌಂಡೆಷನ್‌ನ ಅಧ್ಯಕ್ಷ ಡಾ| ಸರದಾರ ಬಲಬೀರಸಿಂಗ್, ಗುರು ನಾನಕ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರು, ಸಂಸ್ಥೆಯ ಉಪಾಧ್ಯಕ್ಷರು ಮತ್ತು ಗುರು ನಾನಕ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.