ಬೀದರ: ನಗರದ ಸರ್ಕಾರಿ ಮೆಡಿಕಲ್ ಕಾಲೇಜ್ (ಬ್ರಿಮ್ಸ್)ನಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿರುವುದರಿಂದ ಖಾಸಗಿ ನೀರಿನ ಮೊರೆ ಹೋಗಿ ಕ್ಯಾನ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
Advertisement
ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದ್ದು, ಮಳೆಗಾಲ ಆರಂಭವಾದರೂ ನೀರಿನ ಬವಣೆ ಮುಗಿಯುವ ಬದಲಿಗೆ ಹೆಚ್ಚಾಗುತ್ತಿದೆ.
Related Articles
Advertisement
ಕಾಲೇಜಿಗೆ ನಗರ ಸಭೆಯ ನೀರಿನ ಸಂಪರ್ಕ ಪಡೆದಿದ್ದು, ಆ ನೀರು ವಿವಿಧ ಪ್ರಯೋಗಾಲಯಕ್ಕೆ ಬಳಸಲಾಗುತ್ತಿದೆ. ಆದರೆ, ಆ ನೀರು ಶೌಚಾಲಯ ಬಳಕೆಗೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿಶೇಷವಾಗಿ ಮಹಿಳಾ ವಿದ್ಯಾರ್ಥಿಗಳ ಗೋಳು ಹೆಚ್ಚಿದೆ. ಆದರೆ, ವಿದ್ಯಾರ್ಥಿಗಳು ಎಲ್ಲವನ್ನು ಸಹಿಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಕಾರಣ ಯಾವುದೇ ಧ್ವನಿ ಎತ್ತಿದ್ದರೆ ಕಾಲೇಜಿನ ಸಿಬ್ಬಂದಿ ಉದ್ದೇಶಪೂರ್ವಕ ದ್ವೇಶ ಸಾಧಿಸುತ್ತಾರೆ. ಶಿಕ್ಷಣಕ್ಕೆ ಅಡಚಣೆ ಉಂಟು ಮಾಡಬಹುದು ಎಂದು ತಿಳಿದು ಮೌನಕ್ಕೆ ಶರಣಾಗಿರುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವೈದ್ಯಕೀಯ ವಸತಿ ನಿಲಯದಲ್ಲಿನ ಶುದ್ಧ ಕುಡಿಯುವ ನೀರಿನ ಯಂತ್ರ ಸೂಕ್ತವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ 10 ವಿದ್ಯಾರ್ಥಿಗಳ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸ್ನಾನಕ್ಕೆ ಬರುವ ನೀರು ಕೂಡ ತುಂಬ ಗಲೀಜು ಇರುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೂಡಲೆ ಕಾಲೇಜಿನ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಕಾಲೇಜಿನ ಮೂರು ಮಹಡಿಗಳಲ್ಲಿನ ಶುದ್ಧ ನೀರಿನ ಘಟಕಗಳು 12 ವರ್ಷಗಳ ಹಿಂದೆ ಅಳವಡಿಸಿದ್ದು, ಸದ್ಯ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ, ಖಾಸಗಿ ನೀರು ಪೂರೈಕೆ ಸಂಸ್ಥೆಗಳಿಂದ ಕ್ಯಾನ್ ನೀರು ತರಿಸಲಾಗುತ್ತಿದೆ. ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಕೂಡ ಆರ್‌ಒ ಅಳವಡಿಸುವ ಕಾರ್ಯ ಮುಂದಿನ 15 ದಿನಗಳಲ್ಲಿ ನಡೆಯಲಿದೆ. ಅಲ್ಲದೆ, ಕಾಲೇಜಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಈಗಾಗಲೇ ಕ್ರಿಯಾ ಯೋಜನೆ ಹಾಕಿಕೊಂಡಿದ್ದು, ಹೊಸ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು.•ಡಾ| ಎಸ್.ವಿ. ಕ್ಷೀರಸಾಗರ,
ಬ್ರಿಮ್ಸ್ ನಿರ್ದೇಶಕ