Advertisement

ಸೋಲು-ಗೆಲುವಿನ ಭಾವನೆ ಬಿಟ್ಟು ತೀರ್ಪು ಗೌರವಿಸೋಣ

03:47 PM Nov 10, 2019 | Team Udayavani |

ಬೀದರ: ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಜತೆಗೆ ಈದ್‌ ಮಿಲಾದ್‌ ಮತ್ತು ಗುರುನಾನಕ್‌ ದೇವ್‌ ಅವರ 550ನೇ ಜಯಂತ್ಯುತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ ಕೋರಿದರು.

Advertisement

ನಗರದ ರಂಗ ಮಂದಿರದಲ್ಲಿ ಶನಿವಾರ ಜಿಲ್ಲೆಯ ಸರ್ವ ಧರ್ಮ ಮುಖಂಡರ, ಸಂಘ ಸಂಸ್ಥೆಗಳ ಪ್ರಮುಖರು ಮತ್ತು ಅಧಿಕಾರಿಗಳೊಂದಿಗೆ ನಡೆದ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ಸಂಬಂಧಪಟ್ಟಂತೆ ಯಾರೂ ಉದ್ವೇಗಕ್ಕೆ ಒಳಗಾಗದೇ ಶಾಂತಿ ಹಾಗೂ ಸೌಹಾರ್ದಯುತವಾಗಿ ಇರಬೇಕು. ಯಾರೇ ಆಗಲಿ ವಿಜಯೋತ್ಸವ, ಮೆರವಣಿಗೆ, ಪ್ರತಿಭಟನೆ ಮಾಡದಂತೆ ನಿರ್ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಾಕುವಂತಿಲ್ಲ. ಅಹಿತಕರವಾದ, ಶಾಂತಿಗೆ ಭಂಗ ತರುವ ವಿಚಾರಗಳನ್ನು ಹಂಚಿಕೊಳ್ಳದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಲವಾರು ವ್ಯವಸ್ಥೆ: ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಪೋಲಿಸ್‌
ಇಲಾಖೆ ಅತ್ಯಂತ ನಿಷ್ಠೆಯಿಂದ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಿರತವಾಗಿದೆ.

ಎಲ್ಲ ಸಮುದಾಯದ ಯುವಜನತೆ ಸಹಕರಿಸಬೇಕು ಎಂದು ಕೋರಿದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪಟಾಕಿ ಮತ್ತು ವಿಜೃಂಭಣೆಯಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಅದರಂತೆ ಜಿಲ್ಲೆಯಾದ್ಯಂತ 144ಕಲಂ ರನ್ವಯ ನಿಷೇಧಾಜ್ಞೆ ಸಹ ಜಾರಿಯಲ್ಲಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಅಗತ್ಯವಿದ್ದಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಲಾಗುವುದು. ಈ ಬಗ್ಗೆ ಯಾರಲ್ಲಿಯೂ ಆತಂಕ ಬೇಡ ಎಂದರು.

Advertisement

ತೀರ್ಪು ಗೌರವಿಸಿ: ಎಲ್ಲ ಸಮುದಾಯದವರು ಸೋಲು-ಗೆಲುವು ಎಂಬ ಭಾವನೆಗಳನ್ನು ತೊರೆದು, ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಎಂದ ಅವರು, ಶಾಂತಿ ಭಂಗ ತರುವಂಥವರ ಬಗ್ಗೆ ನಿಗಾ ಇಡುವಂತೆ ಸಲಹೆ ನೀಡಿದರು. ಜಿಲ್ಲೆಯ ಜನರ ಶಾಂತಿಯ ಬದುಕಿಗೆ ಯಾವುದೇ ರೀತಿಯ ತೊಡಕಾಗದಂತೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಬದ್ಧವಾಗಿದೆ. ಎಲ್ಲಿಯಾದರೂ ಸಮಸ್ಯೆ ಕಂಡು ಬಂದಲ್ಲಿ, ಯಾರಾದರೂ ಶಾಂತಿಗೆ ಭಂಗ ತರುವ ಕೆಲಸದಲ್ಲಿ ತೊಡಗಿದಲ್ಲಿ ನೇರವಾಗಿ ನಮ್ಮ ಗಮನಕ್ಕೆ ತಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಮಾತನಾಡಿ, ಜಿಲ್ಲೆಯಲ್ಲಿ ನ.10ರಂದು ನಡೆಯುವ ಈದ್‌ ಮಿಲಾದ್‌, ಗುರುನಾನಕರ 550ನೇ ಜನ್ಮ ದಿನಕಾರ್ಯಕ್ರಮ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್‌ ಇಲಾಖೆಯಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಬಂದೋಬಸ್ತ್ಗಾಗಿ ಒಟ್ಟು 1,794 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗಳಿಂದ ಪೊಲೀಸ್‌ ಸಿಬ್ಬಂದಿಯನ್ನು ತರಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಾದ ಮೌಲಾನಾ ವಹೀದ್‌ ಖಾಸೀಂ, ಮಹ್ಮದ್‌ ಆಮೀರ್‌, ಮಹ್ಮದ್‌ ಮೊಹಜಂ ಹಾಗೂ ಬಿಜೆಪಿ ಮುಖಂಡ ಎನ್‌.ಆರ್‌. ವರ್ಮಾ ಅವರು, ಅಯೋಧ್ಯೆ ವಿವಾದದಲ್ಲಿ ತೀರ್ಪು ಯಾರದೇ ಪರವಾಗಿ ಬರಲಿ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಜಾತಿ- ಧರ್ಮ ಮರೆತು ಎಲ್ಲರೂ ಸೌಹಾರ್ದತೆಯಿಂದ ಬದುಕಬೇಕಿದೆ. ಯಾವುದೇ ಸಂಭ್ರಮ ಬೇಡ, ಹಬ್ಬಗಳನ್ನು ಪ್ರೀತಿ- ವಿಶ್ವಾಸದಿಂದ ಆಚರಿಸೋಣ ಎಂದು ಮನವಿ ಮಾಡಿದರು. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ಮತ್ತಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಡಿವೈಎಸ್‌ಪಿ ವೆಂಕನಗೌಡ ಪಾಟೀಲ, ಎಂ.ಆರ್‌. ಚೌಬೆ ಹಾಗೂ ಅಧಿಕಾರಿಗಳು ಇದ್ದರು. ಸೌಹಾರ್ದತಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next