Advertisement

ಜಾನಪದ ಹಾಡುಗಳು ಸರಳ-ಸುಂದರ: ಖೇಣಿ

03:49 PM Jul 14, 2019 | Naveen |

ಬೀದರ: ಸಂಗೀತದ ಹಾಡುಗಳನ್ನು ಸಂಗೀತ ಕಲೆ ಬರುವ ಕಲಾವಿದರು ಮಾತ್ರ ಹಾಡುತ್ತಾರೆ. ಆದರೆ ಜಾನಪದ ಹಾಡಗಳನ್ನು ಯಾರು ಬೇಕಾದರೂ ಹಾಡಬಹುದಾಗಿದೆ. ಅಲ್ಲದೆ, ಜಾನಪದ ಹಾಡುಗಳು ಮನಸ್ಸಿಗೆ ಆನಂದ ನೀಡುತ್ತವೆ ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.

Advertisement

ಮನ್ನಳ್ಳಿ ಗ್ರಾಮದ ಎಬಿವಿಪಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜನಪದ ಆಟಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ಹಾಡುಗಳು ಸರಳವಾಗಿರುತ್ತವೆ. ಇಂತಹ ಜನಪದ ಹಾಡುಗಳ ಕುರಿತು ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡಬೇಕು. ಜನಪದ ಹಾಡುಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಹಿಂದೆ ಸಾಕಷ್ಟು ಬಾರಿ ನಾನು ಹಾಡುಗಳನ್ನು ಕೇಳಿದ್ದೇನೆ. ಜಾನಪದ ಪರಂಪರೆ ಉಳಿಸಲು ಪ್ರತಿಯಬ್ಬರೂ ಶ್ರಮಿಸಬೇಕು ಎಂದರು.

ಸತ್ಯಂ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ| ಮಹಾದೇವಿ ಕಪಲಾಪುರೆ ಮಾತನಾಡಿ, ಹಿಂದೆ ಜನಪದ ಆಟಗಳು ಮಾನವ ಜನಾಂಗದ ಅವಿಭಾಜ್ಯ ಅಂಗಗಳಾಗಿದ್ದವು. ಮಕ್ಕಳು, ದೊಡ್ಡವರು, ಸಮಯ ಹೊಂದಿಸಿಕೊಂಡು ಆಟಗಳನ್ನು ಆಡುತ್ತಿದ್ದರು. ಆದರೆ, ಇಂದಿನ ಆಧುನಿಕ ಯುಗದಲ್ಲಿ ಅತಿಯಾದ ಮೊಬೈಲ್ ಹಾಗೂ ವಿವಿಧ ತಂತ್ರಜ್ಞಾನಗಳ ಬಳಕೆಯಿಂದ ಜನಪದ ಆಟಗಳು ಮರೆಯಾಗಿವೆ. ಅಂತಹ ಜನಪದ ಆಟಗಳ ಸಂರಕ್ಷಣೆ ಆಗಬೇಕಿದೆ. ಜನಪದ ಆಟಗಳಿಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಮದುವೆ ಸಮಾರಂಭಗಳಲ್ಲಿ ಮದುಮಕ್ಕಳಿಗೆ ಆಟ ಆಡಿಸುವುದು, ಲಗೋರಿ, ಗಿಲ್ಲಿ ದಾಂಡು, ಕುಂಟೆಬಿಲ್ಲೆ, ಚಿಕ್ಕ ಹಳ್ಳುಗಳಿಂದ ಆಡುವ ಚಮ್ಮಾ ಆಟ, ಕುಸ್ತಿ, ಕಬಡ್ಡಿ, ಚದುರಂಗ ಹೀಗೆ ಅನೇಕ ಆಟಗಳನ್ನು ಹಿಂದೆ ಆಡುತ್ತಿದ್ದರು. ಆದರೆ ಇಂದು ಈ ಎಲ್ಲಾ ಆಟಗಳನ್ನು ಮೊಬೈಲ್ನಲ್ಲಿಯೇ ಆಡಿ ದೈಹಿಕ ಶ್ರಮವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಮನುಷ್ಯನ ಆಯುಷ್ಯ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿ, ದೇಶಿ ಆಟಗಳನ್ನು ಆಡುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ. ಇಂದಿನ ಯುವ ಪೀಳಿಗೆ ಜನಪದ ಆಟಗಳನ್ನು ಆಡಲು ಸೋಮಾರಿತನ ಮಾಡುತ್ತಿದ್ದಾರೆ. ಹೀಗಾಗಿಯೇ ಅವರಲ್ಲಿ ಉತ್ಸಾಹ ಮತ್ತು ಚಾಕಚಕ್ಯತೆ ಕಡಿಮೆಯಾಗುತ್ತಾ ಬರುತ್ತಿದೆ. ಜನಪದ ಆಟಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ. ಒಂದು ಜನಪದ ಆಟವು ಹತ್ತಾರು ಯೋಗದ ಆಸನಗಳಿಗೆ ಸರಿಸಮವಾಗುತ್ತದೆ. ವಿಪರ್ಯಾಸ ಎಂದರೆ ಮಕ್ಕಳು ಈ ಆಟಗಳಿಂದ ದಿನೇ ದಿನೇ ದೂರ ಸರಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

Advertisement

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ಕರ್ನಾಟಕ ಜಾನಪದ ಪರಿಷತ್ತು ಹಲವಾರು ಜನಪದ ಕಲಾವಿದರಿಗೆ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಶಿಷ್ಯವೇತನ ಹಾಗೂ ವಿವಿಧ ಪ್ರಶಸ್ತಿಗಳನ್ನು ಅರ್ಹತೆ ಮೇರೆಗೆ ನೀಡುತ್ತಾ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮಾಯಾ ರಾಠೊಡ ಎಂಬ ಜನಪದ ಲಂಬಾಣಿ ಕಲಾವಿದೆಗೆ 1.20 ಲಕ್ಷ ಕೇಂದ್ರದಿಂದ ಶಿಷ್ಯವೇತನ ಮಂಜೂರು ಮಾಡಲಾಗಿದೆ. ಯುವ ಜನಪದ ಸಾಹಿತಿ ಮಹಾರುದ್ರ ಡಾಕುಳಗಿ ಅವರನ್ನು ರಾಷ್ಟ್ರೀಯ ಜೂನಿಯರ್‌ ಫೆಲೋಶಿಪ್‌ ಪ್ರಶಸ್ತಿಗೆ ಕೇಂದ್ರದಿಂದ ಆಯ್ಕೆಯಾಗಿದ್ದಾರೆ. ಅವರಿಗೆ 2.40 ಲಕ್ಷ ರೂ. ನೀಡಲಾಗುತ್ತಿದೆ ಎಂದು ವಿವರಿಸಿದರು.

ಮನ್ನಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಚಂದ್ರಕಾಂತ ರಾಗಾ, ತಾಪಂ ಸದಸ್ಯ ಚಂದ್ರಕಾಂತ ನಾಗಣ್ಣ ಮಡಕಿ, ಎಬಿವಿಪಿ ವಸತಿ ಶಾಲೆಯ ಪ್ರಾಚಾರ್ಯ ಶರಣಪ್ಪ ಬಿರಾದಾರ, ಅಶೋಕ ಸಿಂಗಾರೆ, ರಾಜಕುಮಾರ ಮಡಕಿ, ಎಸ್‌.ಬಿ. ಕುಚಬಾಳ, ಲಕ್ಷ್ಮಣರಾವ್‌ ಕಾಂಚೆ, ಚನ್ನಬಸವ ಕಾಮಣ್ಣ, ಶ್ರೀಕಾಂತ ತೂಗಾ, ದೇವಿದಾಸ ಜೋಶಿ ಸೇರಿದಂತೆ ಅನೇಕರು ಇದ್ದರು. ಕರ್ನಾಟಕ ಜಾನಪದ ಪರಿಷತ್ತು ಬೀದರ ದಕ್ಷಿಣ ಘಟಕ ಮನ್ನಳ್ಳಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು ನವದೆಹಲಿ ಹಾಗೂ ಆಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮನ್ನಳ್ಳಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next