Advertisement

ಉತ್ತಮ ಕಾರ್ಯವೇ ಜನರ ಪ್ರೀತಿಗೆ ಮಾರ್ಗ

10:19 AM Jul 14, 2019 | Naveen |

ಬೀದರ: ಈ ಕಾಲದಲ್ಲಿ ದುಡ್ಡಿನಿಂದ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಚುನಾಯಿತ ಜನ ಪ್ರತಿನಿಧಿಗಳು ಅವರ ಕಾಲ ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ, ಜನರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡರೆ ಸಾಕು ಜನರು ಅವರನ್ನು ಮರೆಯುವುದಿಲ್ಲ ಎಂದು ಚಿದಂಬರಾಶ್ರಮದ ಡಾ| ಶಿವಕುಮಾರ ಸ್ವಾಮೀಜಿ ನುಡಿದರು.

Advertisement

ನಗರದ ರಂಗ ಮಂದಿರದಲ್ಲಿ ನಾಗರಿಕ ಸಮಿತಿ ಹಮ್ಮಿಕೊಂಡಿದ್ದ ಸಂಸದ ಭಗವಂತ ಖೂಬಾ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಐದು ವರ್ಷದಲ್ಲಿ ಸಂಸದ ಭಗವಂತ ಖೂಬಾ ಉತ್ತಮ ಕೆಲಸ ಮಾಡಿದ್ದಾರೆ ಎಂದು ಇಂದು ನಡೆದ ಸಮಾರಂಭದಲ್ಲಿ ಹೆಚ್ಚು ಜನರು ಸೇರಿದ್ದಾರೆ. ಜನರ ಮಧ್ಯೆ ಉಳಿದುಕೊಂಡು ಜನರ ಸೇವೆ ಮಾಡುವವರಿಗೆ ಜನರು ಗೌರವ ನೀಡುತ್ತಾರೆ. ಜನಪ್ರತಿನಿಧಿಗಳು ತಮ್ಮ ಕರ್ತವ್ಯಗಳ ಬಗ್ಗೆ ಕಾಳಜಿ ವಹಿಸಬೇಕು. ನಿಗದಿತ ಅವಯಲ್ಲಿ ವಿವಿಧ ಯೋಜನೆಗಳು ಜನರಿಗೆ ಮುಟ್ಟುವಂತೆ ಮಾಡುವ ಗುರಿ ಹೊಂದಬೇಕು. ಗುರಿ ಸಾಧಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಆಗ ಮಾತ್ರ ರಾಜಕಾರಣಿಗಳು ಜನರ ಮಧ್ಯೆ ಉಳಿದುಕೊಳ್ಳಲು ಸಾಧ್ಯ ಎಂದರು.

ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ, ಮನುಷ್ಯನ ಜೀವನದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಸಂಸದ ಭಗವಂತ ಖೂಬಾ ತಮ್ಮ ಕಾರ್ಯಗಳ ಮೂಲಕ ಮಾಡಿದ್ದಾರೆ. ಮೌನ ಕ್ರಾಂತಿಯ ಮೂಲಕ ಕೆಲಸ ಮಾಡಿ ಜನರಿಂದ ಚಪ್ಪಾಳೆ ಹಾಕಿಸಿಕೊಳ್ಳುವ ಕೆಲಸವನ್ನು ಸಂಸದರು ಮಾಡುತ್ತಿರುವುದು ಜನರಿಗೆ ಸಂತಸ ತಂದಿದೆ ಎಂದರು.

ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಅದೃಷ್ಟ ಬೇಕಾಗುತ್ತದೆ. ಒಂದು ಚುನಾವಣೆ ಎದುರಿಸುವ ಮೂಲಕ ದೇಶದ ಆಡಳಿತದ ಒಂದು ಭಾಗವಾಗಿ ಭಾಗವಹಿಸುವುದು ಸುಲಭದ ಮಾತಲ್ಲ. ಇಂತಹ ಅವಕಾಶಗಳು ಎಲ್ಲರಿಗೂ ದೊರೆಯುವುದಿಲ್ಲ. ಅಧಿಕಾರ ಸಿಕ್ಕವರು ಸೂಕ್ತವಾಗಿ ನಿಭಾಯಿಸುವ ಮೂಲಕ ಜನರ ಸೇವೆಗೆ ಅಣಿಯಾಗಬೇಕು ಎಂದು ತಿಳಿಸಿದರು.

Advertisement

ಶಾಹೀನ ಕಾಲೇಜಿನ ಅಧ್ಯಕ್ಷ ಅಬ್ದುಲ್ ಖದೀರ್‌ ಮಾತನಾಡಿ, ಅನೇಕ ಜನ ಪ್ರತಿನಿಧಿಗಳು ತಮ್ಮ ಮೊಬೈಲ್ ಕರೆ ಸ್ವೀಕರಿಸುವುದಿಲ್ಲ. ಆದರೆ, ಸಂಸದ ಭಗವಂತ ಖೂಬಾ ಜನಸಾಮಾನ್ಯರ ಕರೆಗಳನ್ನೂ ಸ್ವೀಕರಿಸಿ ಮಾತನಾಡುವ ವ್ಯಕ್ತಿತ್ವ ಜನರಿಗೆ ಇಷ್ಟವಾಗಿದೆ. ಅಲ್ಲದೆ, ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ, ಜಿಲ್ಲೆಯ ಯುವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ದೊಡ್ಡ ಕೈಗಾರಿಕ ಕಂಪನಿಗಳನ್ನು ಜಿಲ್ಲೆಯಕಡೆಗೆ ತರುವ ಕೆಲಸವನ್ನು ಸಂಸದರು ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆರ್‌ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಅಷ್ಟೂರ ಮಾತನಾಡಿ, ಕೇಂದ್ರ ಸರ್ಕಾರದ ನೂರಾರು ಯೋಜನೆಗಳನ್ನು ಬೀದರ ಜಿಲ್ಲೆಯ ಜನರಿಗೆ ಮುಟ್ಟಿಸುವ ಕೆಲಸವನ್ನು ಸಂಸದರು ಮಾಡಿದ್ದಾರೆ. ಅನೇಕ ಹೊಸ ರೈಲು ಸಂಚಾರ ಪ್ರಾರಂಭಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿದ್ದಾರೆ. ಇದೀಗ ಜಿಲ್ಲೆಯ ಜನರ ಆಸೆಯಂತೆ ಬೀದರ್‌-ಕಲಬುರಗಿ-ಬೆಂಗಳೂರು ರೈಲು ಸಂಚಾರವನ್ನು ಕೂಡಲೆ ಪ್ರಾರಂಭಿಸಲು ಸಂಸದರು ಮುಂದಾಗಬೇಕು ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಡವರ ಕಾಳಜಿ ಹೊಂದಿದೆ. ಮೋದಿ ಅವರು ರೂಪಿಸಿದ ಅನೇಕ ಯೋಜನೆಗಳ ಲಾಭವನ್ನು ಜಿಲ್ಲೆಯ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಕೂಡ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು, ವಿವಿಧ ಸಮುದಾಯದ ಜನರು ಸಂಸದ ಖೂಬಾ ಅವರನ್ನು ಸನ್ಮಾನಿಸಿದರು. ಆರ್‌ಆರ್‌ಕೆ ಶಿಕ್ಷಣಸಂಸ್ಥೆ ಅಧ್ಯಕ್ಷ ರಮೇಶಕುಮಾರ ಪಾಂಡೆ, ದರಬಾರ ಸಿಂಗ್‌, ಸೋಮಶೇಖರ ಪಾಟೀಲ ಗಾದಗಿ, ಗುರುನಾಥ ಕೊಳ್ಳುರ, ಬಸವರಾಜ ಧನ್ನೂರ, ಅಶೋಕ ಪಾಟೀಲ, ಶಿವಶರಣಪ್ಪ ವಾಲಿ, ಚನ್ನಬಸವ ಹಾಲಹಳ್ಳಿ, ಸುರೇಶ ಚನ್ನಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next