ಬೀದರ: ಟೋಲ್ ಪ್ಲಾಜಾಗಳಲ್ಲಿ ರಸ್ತೆ ಶುಲ್ಕ ಕಟ್ಟಲು ಇನ್ನುಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ. ಸುಗಮ ಸಂಚಾರ, ನಗದು ರಹಿತ ವ್ಯವಸ್ಥೆಗಾಗಿ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟಾಗ್ (ಇ-ಟೋಲ್ ಸಂಗ್ರಹ) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಟೋಲ್‌ನಲ್ಲೂ ಈಗಾಗಲೇ ಫಾಸ್ಟಾಗ್ ವ್ಯವಸ್ಥೆ ಅಳವಡಿಸಿ ಶುಲ್ಕ ಸಂಗ್ರಹಿಸಲಾಗುತ್ತಿದ್ದ, ಹೊಸ ವ್ಯವಸ್ಥೆ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಗರಿಷ್ಠ ಮುಖಬೆಲೆಯ ನೋಟು ಅಮಾನ್ಯ ಮೂಲಕ ನಗದು ರಹಿತ ವ್ಯವಸ್ಥೆಗೆ ಒತ್ತು ನೀಡುತ್ತ ಬಂದಿರುವ ಕೇಂದ್ರ ಸರ್ಕಾರ 2016ರಲ್ಲಿಯೇ ಫಾಸ್ಟಾಗ್ ಯೋಜನೆ ಜಾರಿಗೊಳಿಸಿ ಟೋಲ್ ಗಳಲ್ಲಿ ತಡೆ ರಹಿತ ಸಂಚಾರ ಮತ್ತು ನಗದು ರಹಿತ ವಹಿವಾಟಿಗೆ ಉತ್ತೇಜಿಸಿದೆ. ಈಗ ಡಿ. 1ರಿಂದ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಿಗೆ ಫಾಸ್ಟಾಗ್ ಅಳವಡಿಕೆ ಕಡ್ಡಾಯಗೊಳಿಸಿದ್ದು, ಈ ವ್ಯವಸ್ಥೆ ಮೂಲಕವೇ ಸವಾರರು ಟೋಲ್ ಸುಂಕ ಕಟ್ಟಬೇಕಾಗಿದೆ. ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮಂಗಲಗಿ ಬಳಿಯ ಹೈದ್ರಾಬಾದ್- ಮುಂಬೈ ರಾಷ್ಟ್ರೀಯ ಹೆದ್ದಾರಿ (65)ಯಲ್ಲಿ 2017ರ ಅಕ್ಟೋಬರ್‌ನಲ್ಲಿ ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗಿದ್ದು, ಆರಂಭದಿಂದಲೇ ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಸಂಗ್ರಹಿಸಲಾಗುತ್ತಿದೆ.
Advertisement
ಪ್ಲಾಜಾದಲ್ಲಿರುವ ಒಟ್ಟು 8 ಪಥಗಳ ಪೈಕಿ ಒಂದು ಲೈನ್ ಹೊರತುಪಡಿಸಿ ಎಲ್ಲ ಮಾರ್ಗಗಳಲ್ಲಿ ಫಾಸ್ಟಾಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಪ್ರತಿ ನಿತ್ಯ 7 ಸಾವಿರ ಕಾರು ಸೇರಿದಂತೆ ಎಲ್ಲ ಬಗೆಯ ವಾಣಿಜ್ಯ ವಾಹನಗಳು ಈ ಟೋಲ್ ಪ್ಲಾಜಾ ಮೂಲಕ ಓಡಾಡುತ್ತಿದ್ದು, ಇದರಲ್ಲಿ ಶೇ. 20ರಷ್ಟು ವಾಹನಗಳು ಮಾತ್ರ ಫಾಸ್ಟಾಗ್ ಸೌಲಭ್ಯ ಹೊಂದಿವೆ.
ನಗದು ರಹಿತ ವಹಿವಾಟು ಉತ್ತೇಜನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ “ಇ-ಟೋಲ್ ಸಂಗ್ರಹ’ ವ್ಯವಸ್ಥೆಯೇ ಫಾಸ್ಟಾಗ್. ಈ ಸೌಲಭ್ಯ ಪಡೆಯಲು ವಾಹನ ಮಾಲೀಕರು ಬ್ಯಾಂಕ್‌ನಲ್ಲಿ ಫಾಸ್ಟಾಗ್ ಪ್ರಿಪೇಯ್ಡ ಖಾತೆ ತೆರೆದು, ಮುಂಗಡ ಹಣ ತುಂಬಬೇಕು. ಬಳಿಕ ವಾಹನದ ಮುಂಭಾಗದ ಗಾಜಿಗೆ ರೇಡಿಯೋ ತರಂಗಾಂತರಗಳನ್ನು ಒಳಗೊಂಡ ಫಾಸ್ಟಾಗ್ ಸ್ಟಿಕ್ಕರ್ ಅಂಟಿಸಲಾಗುವುದು. ಈ ಸ್ಟಿಕ್ಕರ್ ಹೊಂದಿರುವ ವಾಹನ ಟೋಲ್ ಸಮೀಪ ಬಂದ ಕೂಡಲೇ ಅಲ್ಲಿ ಅಳವಡಿಸಿರುವ ಟ್ಯಾಗ್ ರೀಡರ್ ಸಾಧನ ವಾಹನದ ಮೇಲಿನ ಸ್ಟಿಕ್ಕರ್ ಸ್ಕ್ಯಾನ್ ಮಾಡುತ್ತದೆ. ತಕ್ಷಣ ಮಾಲೀಕರ ಖಾತೆಯಿಂದ ಹಣ ಕಡಿತವಾಗಿ, ವಾಹನಗಳ ಸಂಚಾರಕ್ಕೆ ಇರುವ ತಡೆ ತೆರೆದುಕೊಳ್ಳುತ್ತದೆ. ಹಣ ಕಡಿತವಾದ ಸಂದೇಶ ವಾಹನ ಮಾಲೀಕರ ಮೊಬೈಲ್‌ಗೆ ಹಾಗೂ ಜಮೆಯಾದ ಸಂದೇಶ ಟೊಲ್ ಕೇಂದ್ರಕ್ಕೆ ರವಾನೆಯಾಗುತ್ತದೆ.
Related Articles
ಟೋಲ್‌ನ ಒಂದು ಕಡೆ ಮಾತ್ರ ಇತರ ಪಾವತಿ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಇಲ್ಲಿ ಫಾಸ್ಟಾಗ್ ಇಲ್ಲದ ವಾಹನಗಳು ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಉಳಿದ ಎಲ್ಲ ಲೈನ್ (ಪಥ)ಗಳಲ್ಲಿ ಫಾಸ್ಟಾಗ್ ಗಳು ಮಾತ್ರ ಇರಲಿವೆ. ಈ ಪಥದಲ್ಲಿ ಫಾಸ್ಟಾಗ್ ವ್ಯವಸ್ಥೆ ಅಳವಡಿಸದೇ ಇರುವ ವಾಹನವಾದರೆ ಟೋಲ್ ಮೊತ್ತದ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ. ಫಾಸ್‌ಟ್ಯಾಗ್‌ಗಳನ್ನು ಫ್ಲಾಜಾ, ಪೆಟ್ರೋಲ್ ಬಂಕ್ ಮತ್ತು ಬ್ಯಾಂಕ್‌ಗಳಲ್ಲಿ ಅಗತ್ಯ ದಾಖಲೆಗಳನ್ನು ಕೊಟ್ಟು ಖರೀದಿಸಬೇಕಿದೆ. ಇನ್ನೂ ಹೊಸ ವಾಹನಗಳಿಗೆ ಫಾಸ್ಟಾಗ್ ಇದ್ದರೆ ಮಾತ್ರ ನೋಂದಣಿ ಮಾಡಲಾಗುತ್ತಿದೆ.
Advertisement
ವಾಹನ ಸವಾರರಲ್ಲಿ ಜಾಗೃತಿಮಂಗಲಗಿ ಪ್ಲಾಜಾದಲ್ಲಿ ಈ ಹಿಂದೆಯೇ ಫಾಸ್ಟಾಗ್ ವ್ಯವಸ್ಥೆ ಅಳವಡಿಸಿದ್ದು, ಈಗ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆ. ನಿತ್ಯ ಸಂಚರಿಸುವ 7 ಸಾವಿರ ವಾಹನಗಳಲ್ಲಿ ಶೇ.20ರಷ್ಟು ವಾಹನಕ್ಕೆ ಮಾತ್ರ ಹೊಸ ಸೌಲಭ್ಯ ಇದೆ. ಇಲ್ಲಿ ನಿತ್ಯ 30 ವಾಹನಗಳಿಗೆ ಫಾಸ್ಟಾಗ್ ಅಳವಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಹೊಸ ವ್ಯವಸ್ಥೆ ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ವಾಹನ ಸವಾರರಲ್ಲಿ ಕನ್ನಡ ಸೇರಿ ತ್ರಿಭಾಷೆ ಮತ್ತು ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಅರುಣಕುಮಾರ,
ವ್ಯವಸ್ಥಾಪಕ ಟೋಲ್ ಪ್ಲಾಜಾ