Advertisement

ಜಿಲ್ಲೆಗೆ 125.39 ಕೋಟಿ ಅನುದಾನ

10:34 AM Jul 26, 2019 | Naveen |

ದುರ್ಯೋಧನ ಹೂಗಾರ
ಬೀದರ:
2018ರ ಮುಂಗಾರು ವಿವಿಧ ಬೆಳೆಗಳಿಗೆ ರೈತರು ಮಾಡಿಸಿದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ 1,29,903 ರೈತರಿಗೆ 125.39 ಕೋಟಿ ಅನುದಾನ ಮಂಜೂರಾಗಿದ್ದು, 55 ಸಾವಿರ ರೈತರು ವಿಮೆ ಯೋಜನೆ ಲಾಭದಿಂದ ದೂರ ಇರುವಂತಾಗಿದೆ.

Advertisement

ಸಮೀಕ್ಷೆ ಆಧಾರದಲ್ಲಿ ಪಾವತಿ: 2018ರಲ್ಲಿ ಜಿಲ್ಲೆಯ 1.84 ಲಕ್ಷ ರೈತರು ಬೆಳೆ ವಿಮೆ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 1.29 ಲಕ್ಷ ರೈತರಿಗೆ ವಿಮಾ ಯೋಜನೆ ಲಾಭ ಬರುತ್ತಿದ್ದು, ಇನ್ನುಳಿದ 55 ಸಾವಿರ ರೈತರು ಯೋಜನೆ ಲಾಭದಿಂದ ದೂರ ಇರುವಂತಾಗಿದೆ. ಬೆಳೆ ಹಾನಿ ಸಮೀಕ್ಷೆ ಆಧಾರದಲ್ಲಿ ಬೆಳೆ ವಿಮೆ ಪಾವತಿಯಾಗಿದ್ದು, ಯಾವ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿಲ್ಲ. ಅಂತಹ ರೈತರಿಗೆ ಬೆಳೆ ವಿಮೆ ಬಂದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈತರ ಖಾತೆಗೆ ಹಣ ಜಮಾ: ತಾಲೂಕುವಾರು ವಿಮಾ ಹಣ ಮಂಜೂರಾಗಿದ್ದು, ರೈತರ ಖಾತೆಗೆ ವಿಮಾ ಹಣ ಪಾವತಿಸುವ ಕಾರ್ಯ ಆರಂಭಗೊಂಡಿದೆ. ಮುಂಗಾರು ಹಂಗಾಮಿನ ಉದ್ದು, ಹೆಸರು, ತೊಗರಿ, ಭತ್ತ, ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ‌, ಸಜ್ಜೆ ಸೇರಿದಂತೆ ಇತರೆ ಬೆಳೆಗಳಿಗೆ ಬೆಳೆವಿಮೆ ಮಂಜೂರಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ. ವಿದ್ಯಾನಂದ ಮಾಹಿತಿ ನೀಡಿದ್ದಾರೆ.

ಕಡಿಮೆ ಅನುದಾನಕ್ಕೆ ಆಕ್ರೋಶ: 2018ರ ವಿಮಾ ಪರಿಹಾರ ಪಡೆಯುವಲ್ಲಿ ಬೀದರ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತೀ ಹೆಚ್ಚು ರೈತರು ವಿಮಾ ಯೋಜನೆಯಲ್ಲಿ ನೋಂದಣಿಯಾಗಿದ್ದು, ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದರೆ ಕಡಿಮೆ ಮೊತ್ತದ ಪರಿಹಾರ ಬಂದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಬೇರೆ ಜಿಲ್ಲೆಗಳಲ್ಲಿ ರೈತರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಪರಿಹಾರ ನೀಡಲಾಗಿದೆ. ಮಳೆ ಬಾರದೇ ವ್ಯಾಪಕ ಬರಗಾಲ ಬಿದ್ದು, ಬೆಳೆಗಳು ಸಂಪೂರ್ಣ ಹಾಳಾಗಿದ್ದರೂ ಜಿಲ್ಲೆಗೆ ಸೂಕ್ತ ಪ್ರಮಾಣದ ವಿಮಾ ಪರಿಹಾರ ಕಲ್ಪಿಸುವಲ್ಲಿ ವಿಮಾ ಕಂಪನಿಗಳು ಮುಂದಾಗಿಲ್ಲ ಎಂದು ರೈತರು ದೂರುತ್ತಿದ್ದಾರೆ.

Advertisement

ಬಿತ್ತಿದ ಬೆಳೆಗೆ ವಿಮೆ ಮಾಡಿಸಿ: ಪ್ರಸಕ್ತ ವರ್ಷದಲ್ಲಿ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ತುಂಬಲು ಜು.31 ಕೊನೆ ದಿನ ಎಂದು ಈಗಾಗಲೇ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ರೈತರು ಹೊಲಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಾತ್ರ ವಿಮೆ ಮಾಡಿಸಬೇಕು. ಬಿತ್ತನೆ ಮಾಡದ ಬೆಳೆಗಳಿಗೆ ವಿಮೆ ಮಾಡಿಸಬಾರದು ಎಂದು ಸೂಚಿಸಿದೆ. ಈ ವರ್ಷ ಬೆಳೆ ವಿಮೆ ಆನ್‌ಲೈನ್‌ ವ್ಯವಸ್ಥೆಗೆ ಒಳಪಟ್ಟಿದ್ದು, ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ರೈತರ ಹೊಲದಲ್ಲಿ ಆ ಬೆಳೆ ಇಲ್ಲವಾದರೆ ವಿಮೆ ಹಣ ಮಂಜೂರು ಆಗುವುದಿಲ್ಲ ಎಂದು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.

2018ರಲ್ಲಿ ಬೆಳೆ ವಿಮೆ ಮಾಡಿಸಿದ ಜಿಲ್ಲೆಯ 1.84 ಲಕ್ಷ ರೈತರ ಪೈಕಿ 1.29 ಲಕ್ಷ ರೈತರಿಗೆ ಬೆಳೆ ವಿಮೆ ಮಂಜೂರಾಗಿದ್ದು, ಹಣ ವರ್ಗಾವಣೆ ಆಗುತ್ತಿದೆ. ಪ್ರಸಕ್ತ ವರ್ಷದ ಬೆಳೆ ವಿಮೆ ಶುರುವಾಗಿದ್ದು, ಜು.31 ಕೊನೆ ದಿನ. ಕಳೆದ ವರ್ಷ ಬೆಳೆ ಹಾನಿ ಸಂಭವಿಸಿದ ಪ್ರದೇಶಗಳಲ್ಲಿನ ರೈತರ ಹೊಲದಲ್ಲಿನ ಬೆಳೆಗಳ ಇಳುವರಿ ಆಧಾರದಲ್ಲಿ ವಿಮೆ ಪಾವತಿಸಲಾಗಿದೆ. ಈ ವರ್ಷ ಆನ್‌ಲೈನ್‌ ವ್ಯವಸ್ಥೆ ಇದ್ದು, ರೈತರು ಬಿತ್ತಿದ ಬೆಳೆಗೆ ವಿಮೆ ಮಾಡಿಸಿ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಬೇಕು.
ಸಿ. ವಿದ್ಯಾನಂದ,
ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೀದರ

Advertisement

Udayavani is now on Telegram. Click here to join our channel and stay updated with the latest news.

Next