ಬೀದರ: ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸಿದರೆ ಬರ ಎದುರಾಗುವುದಿಲ್ಲ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಡಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಿಡ-ಮರಗಳಿದ್ದರೆ ಯಾವುದೇ ಪ್ರದೇಶದಲ್ಲೂ ಬರ ಉಂಟಾಗುವುದಿಲ್ಲ. ಬೀದರ್ ಜಿಲ್ಲೆ ಪದೆಪದೆ ಬರಗಾಲಕ್ಕೆ ಒಳಗಾಗುತ್ತಿದ್ದು, ಜಿಲ್ಲೆಯ ಯುವ ಜನರು ಗಿಡ-ಮರಗಳನ್ನು ಹೆಚ್ಚು ಸಂಖ್ಯೆಯಲ್ಲಿ ಬೆಳೆಸಲು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ಅಂಗಳದಲ್ಲಿ ಮತ್ತು ಮುಂಭಾಗದಲ್ಲಿ ಗಿಡಗಳನ್ನು ಬೆಳೆಸಬೇಕು. ಮನೆಯಲ್ಲಿ ಪೂಜೆ ಮಾಡಿದಾಗ ಆ ನೀರನ್ನು ರಸ್ತೆ, ಚರಂಡಿಗೆ ಚೆಲ್ಲದೇ ಗಿಡಗಳಿಗೆ ಹಾಕುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಮನೆಗೊಂದು ಸಸಿ ನೆಡುವ ಸಂಕಲ್ಪ ಮಾಡಿದರೆ ಮಾತ್ರ ಜಿಲ್ಲೆ ಹಸಿರು ನಾಡಾಗಿ ಗುರುತಿಸಿಕೊಂಡು ಉತ್ತಮ ಮಳೆ ಸುರಿಯುತ್ತದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ ಮಾತನಾಡಿ, ಇಂದು ಸಮಯಕ್ಕೆ ಸರಿಯಾಗಿ ಮಳೆ-ಬೆಳೆ ಆಗದಿರುವುದಕ್ಕೆ ಅರಣ್ಯ ನಾಶವೇ ಮುಖ್ಯ ಕಾರಣವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗಿಡ ಮರಗಳನ್ನು ಬೆಳೆಸುತ್ತ ಕಾಳಜಿ ವಹಿಸಬೇಕು. ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಮೂಲಕ ಭವಿಷ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಇಂದಿನಿಂದಲ್ಲೆ ಸಿದ್ಧತೆ ಮಾಡಬೇಕು ಎಂದರು.
ವಲಯ ಅರಣ್ಯಾಧಿಕಾರಿ ಶಿವರಾಜ ಮೇಟಿ ಮಾತನಾಡಿ, ಅರಣ್ಯ ಇಲಾಖೆಯಿಂದ ಪ್ರತಿವರ್ಷ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಎನ್‌ಎಸ್‌ಎಸ್ ಘಟಕದ ವತಿಯಿಂದ ಈ ವರ್ಷ ಕಾಲೇಜಿನಲ್ಲಿ ನೂರು ಗಿಡ ನೆಡುವ ಗುರಿ ಇದೆ. ವಿದ್ಯಾರ್ಥಿಗಳು ಖಾಲಿ ಜಾಗದಲ್ಲಿ ಗಿಡ ಮರಗಳನ್ನು ಬೆಳೆಸಲು ಮುಂದಾಗಬೇಕು. ಕಾಲೇಜಿನಲ್ಲಿ ನೆಟ್ಟ ಸಸಿಗಳನ್ನು ಮರವಾಗಿ ಬೆಳೆಸಲು ವಿದ್ಯಾರ್ಥಿಗಳು ಕಾಳಜಿ ಬೆಳೆಸಿಕೊಳ್ಳಬೇಕು. ಮನುಷ್ಯನ ಉಳಿವಿಗಾಗಿ ಗಿಡ-ಮರಗಳು ಅನಿವಾವಾರ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದರು.
ಪ್ರಭಾರಿ ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಅರಿವು ಮೂಡಿಸಲು ಈ ಕಾರ್ಯ ಕ್ರಮ ಸಹಕಾರಿಯಾಗಿದೆ. ಎಲ್ಲ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಅಧಿಕಾರಿ ಶಿವಕುಮಾರ ಕಟ್ಟೆ, ಬಕ್ಕಪ್ಪ ನಿರ್ಣಾಕರ, ಶಾಂತಪ್ಪ ಪೂಜಾರಿ, ರವೀಂದ್ರ ಬಡಿಗೇರ, ಮಚ್ಛೇಂದ್ರ ಎಸ್., ವಿಜಯಕುಮಾರ ಮಾನಕಾರಿ, ಚನ್ನಬಸಪ್ಪ ಪಾಟೀಲ, ಶೈಲಜಾ ನೀಲಶೆಟ್ಟಿ, ಸುರೇಖಾ, ಭಾರತಿ ಚೌಧರಿ, ಶ್ರೀದೇವಿ ಗಟ್ಟು, ವಕೀಲ ಪಟೇಲ, ನಾಗರಾಜ ಶೆಟಕಾರ, ಅರುಣಕುಮಾರ ಗುಮ್ಮಳ, ವಿಜಯಶೆಟ್ಟಿ, ಎಚ್.ಎಸ್. ರವೀಂದ್ರ, ಅಣ್ಣೆಪ್ಪ ಕೊಟ್ರೆ, ರವಿಚಂದ್ರ, ಅಂತೆಪ್ಪ ಇನ್ನಿತರರು ಇದ್ದರು.