ಬೀದರ: ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅದಕ್ಕೆ ಸಂಬಂಧಪಟ್ಟ ದಂಡಗಳ ವಿವರ ಪಟ್ಟಿಯನ್ನು ತಯಾರಿಸಿ ಸರ್ಕಾರಿ ಬಸ್‌ಗಳ ಮೇಲೆ ಮತ್ತು ಕೆಲವು ಮುಖ್ಯ ರಸ್ತೆಗಳ ಬದಿಯಲ್ಲಿ ಪ್ರದರ್ಶಿಸಬೇಕು. ರಸ್ತೆ ಸುರಕ್ಷತೆ ಕುರಿತು ಕರಪತ್ರಗಳನ್ನು ಮುದ್ರಿಸಿ ಹಂಚುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್. ಮಹಾದೇವ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆ ಸಭೆಯಲ್ಲಿ ಮಾತನಾಡಿದ ಅವರು, ಸಂಚಾರಿ ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಅಪಘಾತಗಳ ಕುರಿತು ಚಲನಚಿತ್ರ ಮಂದಿರಗಳಲ್ಲಿ ಸ್ಲೈಡ್‌ಗಳನ್ನು ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ರಸ್ತೆಗಳ ಮೇಲೆ ಅಗತ್ಯವಿರುವ ಕಡೆ ರೇಖಾ ಗುರುತುಗಳನ್ನು ಹಾಗೂ ಸುರಕ್ಷತಾ ಗುರುತುಗಳನ್ನು ಮಾಡಬೇಕಿದೆ. ಅಗೋಚರ ರಸ್ತೆ ತಿರುವುಗಳನ್ನು ಗುರುತಿಸಬೇಕಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಭೆಗೆ ತಿಳಿಸಿದರು. ರಸ್ತೆಯ ಮೇಲೆ ಕ್ಯಾಟ್ ಐಸ್, ಎಡ್ಜ್ ಮಾರ್ಕಿಂಗ್, ಝಿಬ್ರಾ ಕ್ರಾಸಿಂಗ್ ಅಳವಡಿಸಲು ಕ್ರಮ ವಹಿಸಬೇಕು. ಅವೈಜ್ಞಾನಿಕ ರಸ್ತೆ ತಡೆಗಳನ್ನು ಗುರುತಿಸಿ ಅವುಗಳನ್ನು ವೈಜ್ಞಾನಿಕವಾಗಿ ಪರಿವರ್ತಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ರಸ್ತೆ ಗುಂಡಿಗಳು, ಅಗೆದಿರುವ ರಸ್ತೆಗಳನ್ನು ಸರಿಪಡಿಸುವುದು, ಮ್ಯಾನ್ ಹೋಲ್ಸ್ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ಜಿಲ್ಲೆಯಲ್ಲಿ ವಿಶಾಲವಾದ ರಸ್ತೆಗಳಿವೆ. ಆದರೆ ಕೆಲವು ಬೀದಿ ವ್ಯಾಪಾರಸ್ಥರು ರಸ್ತೆಯ ಎರಡೂ ಬದಿಗಳನ್ನು ಆವರಿಸಿ ಸುಗಮ ರಸ್ತೆ ಸಂಚಾರಕ್ಕೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಗರದ ಯಾವ ಯಾವ ಕಡೆಗಳಲ್ಲಿ ರಸ್ತೆಗಳನ್ನು ಅತಿಕ್ರಮಿಸಿರುವುದು ಕಂಡುಬರುತ್ತದೋ ಅಲ್ಲಿ ಅಂತಹ ಅಂಗಡಿಗಳ ತೆರವಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆ ಮತ್ತು ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ.ವಿಶ್ವನಾಥ ಮಾತನಾಡಿ, ಜಿಲ್ಲಾದ್ಯಂತ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಈಗಾಗಲೇ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಪೌರಾಯುಕ್ತ ಬಸಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಎಚ್.ಸಿ. ಹಾಗೂ ಇತರರು ಇದ್ದರು.