Advertisement

ಹಾಸ್ಟೇಲ್‌ ಅವ್ಯವಸ್ಥೆಗೆ ಸಚಿವರ ಅಸಮಾಧಾನ

01:45 PM Jan 01, 2020 | Naveen |

ಬೀದರ: ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಕಂಡು “ಛೀ ಛೀ ಇಂತಹ ವಾತಾವರಣದಲ್ಲಿ ಮಕ್ಕಳು ಹೇಗೆ ಕಲಿಯಬೇಕು? ಎಂದು ಸಚಿವ ಪ್ರಭು ಚವ್ಹಾಣ ಅವರು ಬೇಸರ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

Advertisement

ನಗರದಲ್ಲಿ ದೀಢೀರ್‌ ಭೇಟಿ ಕಾರ್ಯಕ್ರಮ ವೇಳೆ ನೌಬಾದ್‌ನ ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುವ ಪದವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದರು. ಆ ವಸತಿ ನಿಲಯದ ಹೊರಾಂಗಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಮತ್ತು ಕೊಳಚೆ ನೀರು ಹಾಸ್ಟೇಲ್‌ ಆವರಣ ಸೇರುತ್ತಿರುವುದನ್ನು ಕಂಡು ಸಚಿವರು ರೋಷಗೊಂಡರು. “ಛೀ ಛೀ ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಹೇಗಿರಬೇಕೆಂದು’ ಬೇಸರ ವ್ಯಕ್ತಪಡಿಸಿದರು.

ಸ್ಥಳಕ್ಕೆ ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ ಅವರನ್ನು ಕರೆಯಿಸಿ, ಖುದ್ದು ತಾವೇ ಅಲ್ಲಿದ್ದ ಗಲೀಜನ್ನು ಸಿಇಒ ಅವರಿಗೆ ತೋರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ದೂರವಾಣಿಯೊಂದಿಗೆ ಮಾತನಾಡಿ, ಈ ಅವ್ಯವಸ್ಥೆ ತಮ್ಮ ಗಮನಕ್ಕೆ ಇಲ್ಲವೇ? ಎಂದು ಕೇಳಿದರು. ಅಧಿಕಾರ ಸ್ವೀಕರಿಸಿ ವಾರವಷ್ಟೇ ಆಗಿದೆ. ಈ ಬಗ್ಗೆ ಪರಿಶೀಲಿಸುವೆ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.

ತಾಲೂಕಾ ಧಿಕಾರಿಗೆ ಎಚ್ಚರಿಕೆ: ಈ ವೇಳೆ ಸ್ಥಳಕ್ಕಾಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಅನೀಲಕುಮಾರ ಅವರಿಗೆ ಅಲ್ಲಿನ ಗಟಾರು ನೀರನ್ನು ತೋರಿಸಿದ ಸಚಿವರು, ತಾವು ಏನು ಮಾಡುತ್ತೀರಿ?, ವಸತಿ ನಿಲಯಗಳಿಗೆ ಯಾವಾಗ ಭೇಟಿ ನೀಡಿದ್ದೀರಿ? ಎಂದು ಕೇಳಿ, ಸರಿಯಾಗಿ ಕೆಲಸ ಮಾಡುವಂತೆ ಅವರಿಗೆ ಎಚ್ಚರಿಕೆ ನೀಡಿದರು. ಸುತ್ತಲಿನ ಕೊಳಚೆಯನ್ನು ವಾರದೊಳಗೆ ತೆಗೆಯುವಂತೆ ಗಡುವು ವಿಧಿಸಿದರು.

ಹಾಸ್ಟೇಲ್‌ ಆವರಣವನ್ನು ಶುಚಿಯಾಗಿಡುವಂತೆ ತಿಳಿಸಿದರು. ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಬೀದರ ಟೌನ್‌ಗೆ ಭೇಟಿ ನೀಡಿದ ಸಚಿವರು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಊಟ ಮಾಡುತ್ತಿದ್ದ ವಿದ್ಯಾರ್ಥಿಗಳ ಜೊತೆ ಕುಳಿತು ಅಡುಗೆಯನ್ನು ಪರೀಕ್ಷಿಸಿದರು. ಈ ಹಾಸ್ಟೇಲ್‌ ವಾರ್ಡನ್‌ ಅವರು ಒಂದು ವಾರ ಇಲ್ಲವೇ 15 ದಿನಕ್ಕೊಮ್ಮೆ ಹಾಸ್ಟೇಲ್‌ಗೆ ಬರುತ್ತಾರೆ. ಮೆನುವಿನಂತೆ ಊಟ ನೀಡುತ್ತಿಲ್ಲ. ಕಾಳು, ಮೊಟ್ಟೆ ಕೊಡುವುದಿಲ್ಲ ಎಂದು ಅಲ್ಲಿನ ವಿದ್ಯಾರ್ಥಿಗಳು ಸಚಿವರ ಎದುರು ದೂರಿದರು. 10 ತಿಂಗಳಾದರೂ ನಮಗೆ ವೇತನ ನೀಡಿಲ್ಲ ಎಂದು ಅಡುಗೆ ಸಿಬ್ಬಂದಿ ತಿಳಿಸಿದರು.

Advertisement

ಇದರಿಂದ ಸಿಡಿಮಿಡಿಗೊಂಡ ಸಚಿವರು, ಹಾಸ್ಟೆಲ್‌ ವಾರ್ಡನ್‌ ಅವರನ್ನು ಸ್ಥಳಕ್ಕೆ ಕರೆಯಿಸಿ, ಮಕ್ಕಳ ಹಾಜರಾತಿ ವಹಿ, ದಾಸ್ತಾನು ವಹಿ ಹಾಗೂ ಇನ್ನಿತರೆ ದಾಖಲಾತಿಗಳನ್ನು ಪರಿಶೀಲಿಸಿದರು. ಅವುಗಳ ನಿರ್ವಹಣೆ ಸಮರ್ಪಕವಾಗಿ ಇಲ್ಲದ್ದನ್ನು ಕಂಡು ವಾರ್ಡನ್‌ ಎಂ.ಡಿ. ಹಪೀಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿಗಳಿಗೆ ದಿನವಹಿ ಖರ್ಚು ಮಾಡಿದ ಬಿಲ್ಲುಗಳು, ವಸತಿ ನಿಲಯಗಳಿಗೆ ಸರಬರಾಜು ಆಗುವ ಆಹಾರ ಧಾನ್ಯಗಳಿಗೆ ಸಂಬಂಧಿಸಿದ ದಾಸ್ತಾನುವಹಿ ಅಸಮರ್ಪಕವಾಗಿರುವುದನ್ನು ಖುದ್ದು ಸಚಿವರು, ಸಿಇಒ ಅವರಿಗೆ ತೋರಿಸಿದರು.

ಸಿಇಒ ಎಚ್ಚರಿಕೆ: ತಾಲೂಕು ಅಧಿ ಕಾರಿಯಾಗಿ ನಿಮ್ಮ ಕೆಲಸವೇನು?, ನೀವು ಕಾಲಕಾಲಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಿದ್ದೀರಾ?, ಎಂದು ಸಿಇಒ ಗಂಗವಾರ್‌ ಅವರು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಯನ್ನು ಪ್ರಶ್ನಿಸಿದರು.

ಮಕ್ಕಳ ಹಾಜರಾತಿ ವಹಿ, ಆಹಾರ ದಾಸ್ತಾನು ವಹಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಯಾಕೆ ಎಂದು ವಾರ್ಡನ್‌ ಅವರಿಗೆ ಸಿಇಒ ಅವರು ಪ್ರಶ್ನಿಸಿದರು. ತಾವು ಬಂದು ನಾಲ್ಕು ತಿಂಗಳಾಗಿದ್ದು, ಇನ್ಮುಂದೆ ಸರಿಯಾಗಿ ಕೆಲಸ ನಿರ್ವಹಿಸುವೆ ಎಂದು ವಾರ್ಡನ್‌ ಪ್ರತಿಕ್ರಿಯಿಸಿದರು.

ದೂರು ದಾಖಲಿಸಲು ಸೂಚನೆ: ವಸತಿ ನಿಲಯದ ಆವರಣದಲ್ಲಿ ಲಾರಿಯೊಂದು ನಿಂತಿದ್ದರ ಬಗ್ಗೆ ಅಲ್ಲಿನ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಈ ರೀತಿ ಆಗಾಗ ವಾಹನಗಳು ಇಲ್ಲಿ ನಿಂತು ನಮಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸಿದರು. ಈ ವಾಹನದ ಬಗ್ಗೆ ದೂರು ದಾಖಲಿಸುವಂತೆ ತಾಲೂಕು ಅಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು. ಈ ಬಗ್ಗೆ ಕ್ರಮ ವಹಿಸುವಂತೆ ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳಿಗೂ ಕೂಡ ಇದೇ ವೇಳೆ ಸಚಿವರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next