ಬೀದರ: ರಾಜ್ಯದ 21 ಜಿಲ್ಲಾ ಸಹಕಾರ ಸಂಸ್ಥೆಗಳಲ್ಲಿ ಬೀದರ ಡಿಸಿಸಿ ಬ್ಯಾಂಕ್ ಗಮನ ಸೆಳೆಯುವಂತಹ ಕಾರ್ಯ ಮಾಡುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಶಾರದಾ ರುಡ್‌ಸೆಟ್‌ನಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಇಒಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಹುಟ್ಟಿ ಶತಮಾನಗಳು ಕಳೆದರೂ ಕೂಡ ಬಡತನ ನಿರ್ಮೂಲನೆ ಆಗಿಲ್ಲ. ಶಿಕ್ಷಣ, ಬಟ್ಟೆ, ಊಟ ಸರಿಯಾಗಿ ಸಿಗುತ್ತಿಲ್ಲ. ಸಹಕಾರ ಕ್ಷೇತ್ರವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ಬಡತನದಲ್ಲಿರುವ ಜನರು ಆರ್ಥಿಕವಾಗಿ ಮುಂದೆ ಬರಬೇಕು ಎಂದರು. ಸಹಕಾರ ಸಂಘಗಳಲ್ಲಿ ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಮಹಿಳಾ ಮಹಾಮಂಡಳ ನಿರ್ದೇಶಕಿ ಶಕುಂತಲಾ ಬೆಲ್ದಾಳೆ ಮಾತನಾಡಿ, ಮಹಿಳೆಯರಿಗೂ ಕೂಡ ಇಂತಹ ತರಬೇತಿಗಳನ್ನು ಕೊಡಬೇಕಾಗಿದೆ. ಮಹಿಳೆಯರು ಸ್ವತಂತ್ರವಾಗಿ ಕೆಲಸ ಮಾಡಲು ಮುಂದೆ ಬರಬೇಕಾಗಿದೆ. ಅವರೂ ಪ್ರತಿಯೊಂದು ಕ್ಷೇತ್ರದಲ್ಲಿ ಪಾಲುಗೊಳ್ಳುವಂತೆ ಇಂತಹ ತರಬೇತಿಗಳು ಸಹಕಾರಿಯಾಗಿವೆ. ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಮೀಸಲಾಗಿರುವ ಅಧಿಕಾರವನ್ನು ಸ್ವತಃ ಚಲಾಯಿಸಲು ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪರಮೇಶ್ವರ ಮುಗಟೆ, ಸಹಕಾರ ಸಂಘಗಳ ಉಪನಿಬಂಧಕ ವಿಶ್ವನಾಥ ಮಲಕೂಡ, ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಂ.ಜಿ. ಪಾಟೀಲ, ಸಹಾರ್ದ ನಿರ್ದೇಶಕ ಪ್ರಭು ಸುಬ್ರಮಣ್ಯಂ ಉಪಸ್ಥಿತರಿದ್ದರು. ಯೂನಿಯನ್ ಸಿಇಒ ಎಚ್.
ಆರ್. ಮಲ್ಲಮ್ಮ ನಿರೂಪಿಸಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು.