ಬೀದರ: ಜನಸಾಮಾನ್ಯರಲ್ಲಿ ಭಾರತದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು ಇಬ್ಬರು ಮಹಿಳೆಯರು ರಾಜಧಾನಿ ಬೆಂಗಳೂರಿನಿಂದ ಹಮ್ಮಿಕೊಂಡಿದ್ದ ಸೈಕಲ್ ಯಾತ್ರೆಯು ಮಂಗಳವಾರ ಗಡಿ ಜಿಲ್ಲೆ ಬೀದರಗೆ ಆಗಮಿಸಿ ಕೊನೆಗೊಂಡಿತು.
ಬೆಂಗಳೂರಿನ ಕವಿತಾ ರೆಡ್ಡಿ ಹಾಗೂ ಮಹಾರಾಷ್ಟ್ರದ ಜಿಗ್ನಾಮೂಡ ಅವರೇ ಸೈಕಲ್ ಯಾತ್ರೆ ಮೂಲಕ ಸಂವಿಧಾನದ ಜಾಗೃತಿ ಮೂಡಿಸುತ್ತಿರುವ ಸಾಹಸಿಗರು. ನ. 26ರಂದು ಬೆಂಗಳೂರಿನಿಂದ ಸೈಕಲ್ ರ್ಯಾಲಿ ಆರಂಭಿಸಿ, ಕರ್ನಾಟಕದ 10 ಜಿಲ್ಲೆಗಳಲ್ಲಿ 817 ಕಿ.ಮೀ. ಸಂಚರಿಸಿದ್ದಾರೆ.
ಸಂವಿಧಾನ ಅಂಗೀಕಾರದ 70ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಯಾತ್ರೆ ಕೈಗೊಂಡಿದ್ದರು. ನಿತ್ಯ 40 ರಿಂದ 70 ಕಿ.ಮೀ. ಕ್ರಮಿಸಿ 6ರಿಂದ 8 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ನ್ಯಾ| ನಾಗಮೋಹನದಾಸ್ ಅವರು ಬರೆದ ಸಂವಿಧಾನ ಓದು ಪುಸ್ತಕಗಳನ್ನು ಸಹ ವಿತರಣೆ ಮಾಡಿದ್ದಾರೆ.
ಯಾತ್ರೆಯ ಸಮಾರೋಪ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ ರೆಡ್ಡಿ, ಸಂವಿಧಾನಕ್ಕೆ ಧಕ್ಕೆ ಬಂದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ. ಅಂಬೇಡ್ಕರ ಅವರು ನೀಡಿರುವ ಹಕ್ಕನ್ನು ಸಂರಕ್ಷಿಸಬೇಕಾಗಿದೆ. ಮಹಿಳೆಯರು ತಮ್ಮ ಸುರಕ್ಷತೆ ಕಾಪಾಡಿಕೊಳ್ಳುವ ಶಕ್ತಿ ನಮ್ಮಲ್ಲಿದೆ ಎಂಬುದನ್ನು ತೋರಿಸುವ ಉದ್ದೇಶದಿಂದಲೂ ನಾವು ಸೈಕಲ್ ತುಳಿದು ಸಂಚರಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಿಂದ ದಾಸಕೊಪ್ಪರ, ಸಿದ್ದಗಂಗಾ, ಶಿರಾ, ಹಿರಿಯೂರು, ಚಳ್ಳಕೇರೆ, ಸಿರಗುಪ್ಪ, ಪೋತನಾಳ, ಮಾನ್ವಿ, ದೇವದುರ್ಗ, ಸೇಡಂ, ಚಿಂಚೋಳಿ ಮೂಲಕ ಬೀದರ್‌ಗೆ ತಲುಪಿದ್ದೇವೆ. ಬೆಂಗಳೂರಿನಲ್ಲಿ ಎನ್‌ಜಿಒ ನಡೆಸುತ್ತಿರುವ ನಾವು ಸುಮಾರು 14 ದಿನಗಳ ಸೈಕಲ್ ಯಾತ್ರೆ ಸಂದರ್ಭದಲ್ಲಿ ಪ್ರವಾಸಿ ಮಂದಿರಗಳಲ್ಲಿ, ಸ್ನೇಹಿತರ ಮನೆಗಳಲ್ಲಿ ವಾಸ ಮಾಡಿದ್ದೇವೆ ಎಂದರು.
ಸಾಹಸಿಗರಿಗೆ ಸನ್ಮಾನಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಇಬ್ಬರು ಸಾಹಸಿ ಮಹಿಳೆಯರು ರಾಜ್ಯಾದ್ಯಂತ ಸೈಕಲ್ ಮೇಲೆ 800ಕ್ಕೂ ಹೆಚ್ಚು ಕಿ.ಮೀ. ಕ್ರಮಿಸಿ ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸಿದ್ದು ದೊಡ್ಡ ಸಾಧನೆ. ಶಾಲೆ ಮಕ್ಕಳಿಗೆ ಸಂವಿಧಾನ ಕುರಿತು ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಹೇಳಿದರು.