ಶಶಿಕಾಂತ ಬಂಬುಳಗೆ
ಬೀದರ: ಸತತ ಬರಗಾಲದಿಂದ ಬಸವಳಿದ ಗಡಿ ಜಿಲ್ಲೆ ಬೀದರನ ರೈತರಿಗೆ ಈ ವರ್ಷ ತೊಗರಿ ಬೆಳೆ ಕೈಹಿಡಿಯಲಿದೆ. ಉತ್ತಮ ಮಳೆ ಮತ್ತು ಕೀಟ ಬಾಧೆ ಇಲ್ಲವಾದ್ದರಿಂದ ತೊಗರಿ ಬೆಳೆ ಬಂಪರ್ ಇಳುವರಿ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದು, ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಅತಿವೃಷ್ಟಿ ಅನಾಹುತ ಸೃಷ್ಟಿಸಿ ಕೃಷಿಗೆ ಪೆಟ್ಟು ಕೊಟ್ಟಿದೆ. ಆದರೆ, ಬೀದರನಲ್ಲಿ ಮಾತ್ರ ಈ ವರ್ಷ ಕೃಷಿಗೆ ಪ್ರಕೃತಿ ಸಾಥ್ ನೀಡಿದೆ. ಹಾಗಾಗಿ ತೊಗರಿ ಹುಲುಸಾಗಿ ಬೆಳೆದು ನಳನಳಿಸುತ್ತಿದ್ದು, ಈ ಬಾರಿ ಉತ್ತಮ ಇಳುವರಿ ಜತೆಗೆ ವೈಜ್ಞಾನಿಕ ದರವೂ ಸಿಗಲಿ ಎಂಬುದು ಅನ್ನದಾತರ ಅಶಯ.
ಬಿತ್ತನೆ ಪ್ರದೇಶ ಇಳಿಮುಖ: ಎರಡೂ¾ರು ವರ್ಷಗಳ ಹಿಂದೆ ತೊಗರಿ ದರ ನಿರೀಕ್ಷೆಗೂ ಮೀರಿ ಗಗನಮುಖೀಯಾಗಿ, ಕೆಜಿ ತೊಗರಿಗೆ 100 ರೂ. ಗಡಿ ದಾಟಿತ್ತು. ಇದರಿಂದ ಖುಷಿಯಲ್ಲಿದ್ದ ರೈತರು, ಮರು ವರ್ಷವೂ ಹೆಚ್ಚಿನ ಪ್ರದೇಶದಲ್ಲಿ ತೊಗರಿಯನ್ನೇ ಬಿತ್ತನೆ ಮಾಡಿದ್ದರು. ಆದರೆ, ದರ ಕುಸಿತದಿಂದಾಗಿ ಸರ್ಕಾರದ ಬೆಂಬಲ ಬೆಲೆಗೆ ಅಂಗಲಾಚಬೇಕಾಯಿತು. ಹೀಗಾಗಿ ಕೆಲ ವರ್ಷಗಳಿಂದ ತೊಗರಿ ಬೆಳೆ ಬಿತ್ತನೆ ಪ್ರದೇಶ ಕಡಿಮೆಯಾಗುತ್ತ ಬರುತ್ತಿದೆ. 82 ಸಾವಿರ ಹೆಕ್ಟೇರ್ ಕ್ಷೇತ್ರ: ಬೀದರ ಜಿಲ್ಲೆಯಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಜಿಆರ್‌ಜಿ- 811, ಮಾರುತಿ, ಜಿಆರ್‌ಪಿ- 152 ಮತ್ತು ಬಿಎಸ್‌ಎಂಆರ್- 736 ತೊಗರಿ ತಳಿ ಬಿತ್ತನೆಗೆ ಬಳಸಲಾಗುತ್ತಿದ್ದು, ಅದರಲ್ಲಿ ಜಿಆರ್‌ಜಿ- 811 ತಳಿ ಹೆಚ್ಚಾಗಿದೆ. ಈಗಾಗಲೇ ತೊಗರಿ ಕಾಳು ಗಟ್ಟಿಯಾಗಿದ್ದು, ಜನವರಿ ಕೊನೆ ವಾರದಿಂದ ಕಟಾವಿಗೆ ಬರಲಿದೆ.
ಎಕರೆಗೆ ನಾಲ್ಕೈದು ಕ್ವಿಂಟಲ್ ಇಳುವರಿ: ತೊಗರಿ ಹೂವಾಡುವ ವೇಳೆ ಮಳೆ ಮತ್ತು ಮಂಜಿನಿಂದಾಗಿ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿತ್ತು. ಇದರಿಂದ ಹೂ-ಎಲೆ ಉದುರಿ ರೈತರಲ್ಲಿ ಕೊಂಚ ಆತಂಕ ತಂದಿತ್ತು. ಆದರೆ, ಮತ್ತೆ ಹೂವಾಡಿ, ಕಾಯಿ ಕಟ್ಟಿಕೊಂಡಿವೆ. ಸದ್ಯದ ವಾತಾವರಣ ರಾಶಿಯ ಅವವರೆಗೂ ಹೀಗೆ ಮುಂದುವರಿದಲ್ಲಿ ಎಕರೆಗೆ 4 ರಿಂದ 5 ಕ್ವಿಂಟಲ್ ತೊಗರಿ ಇಳುವರಿ ಸಿಗಬಹುದೆಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ತೊಗರಿ ಜತೆಗೆ ಸೋಯಾಬಿನ್, ಕಡಲೆ, ಜೋಳ ಸೇರಿ ಬಹುತೇಕ ಬೆಳೆ ಚೆನ್ನಾಗಿದ್ದು, ಇಳುವರಿಯೂ ಹೆಚ್ಚಳವಾಗಲಿದೆ. ಹೀಗಾಗಿ ತೊಗರಿ ಮಾರುಕಟ್ಟೆಗೆ ಬರುವ ಮುನ್ನ ಖರೀದಿ ಕೇಂದ್ರ ಪ್ರಾರಂಭಿಸಬೇಕು ಮತ್ತು ಅಗತ್ಯ ಪ್ರಮಾಣದಲ್ಲಿ ಖರೀದಿ ಆಗಬೇಕು. ಜತೆಗೆ ತೊಗರಿ ಪೂರೈಸಿದ ರೈತರಿಗೆ ತಕ್ಷಣ ಹಣ ಪಾವತಿಸಿ ಅಲೆದಾಡುವುದನ್ನು ತಪ್ಪಿಸಬೇಕು ಎಂಬುದು ಅನ್ನದಾತರ ಅಳಲು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.
ಬೀದರ ಜಿಲ್ಲೆಯಲ್ಲಿ ಈ ವರ್ಷ ತೊಗರಿ ಬೆಳೆ ಹುಲುಸಾಗಿ ಬೆಳೆದಿದೆ. ಈಗಾಗಲೇ ಶೇ. 50ರಷ್ಟು ಕಾಳು ಕಟ್ಟಿಕೊಂಡಿದ್ದು, ಉತ್ತಮ ಇಳುವರಿ ಸಾಧ್ಯತೆ ಇದೆ. ಪಲ್ಸ್ ಮ್ಯಾಜಿಕ್ ಔಷಧ ಬೆಳೆಗೆ ಸಿಂಪಡಣೆ ಮಾಡಿದಲ್ಲಿ ಕಾಳು ಗಟ್ಟಿಯಾಗಲು ಅನುಕೂಲವಾಗಲಿದೆ ಮತ್ತು ಹೂವು ಉದುರುವುದು ತಪ್ಪಲಿದೆ. ರೈತರು ಈ ಕ್ರಮ ಅನುಸರಿಸಿದ್ದಲ್ಲಿ ತೊಗರಿಯಲ್ಲಿ ಶೇ. 15-20ರಷ್ಟು ಇಳುವರಿ ಜಾಸ್ತಿಯಾಗಲಿದೆ.
ಸುನೀಲಕುಮಾರ ಎನ್.ಎಂ,
ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಬೀದರ
ಸಕಾಲಕ್ಕೆ ಮಳೆ ಮತ್ತು ಹೆಚ್ಚಿನ ಕೀಟ ಬಾಧೆ ಕಂಡು ಬಾರದ ಕಾರಣ ಈ ವರ್ಷ ತೊಗರಿ ಬೆಳೆ ಉತ್ತಮವಾಗಿದೆ. ವಾತಾವರಣ ಹೀಗೆ ಸಾಥ್ ನೀಡಿದರೆ ಬಂಪರ್ ಇಳುವರಿ ಸಿಗುವ ನಿರೀಕ್ಷೆ ಇದೆ. ಉತ್ತಮ ಬೆಳೆ ಇದ್ದಾಗ ದರ ಇರಲ್ಲ ಮತ್ತು ದರ ಇದ್ದಾಗ ಇಳುವರಿ ಕುಸಿದಿರುತ್ತದೆ. ಹಾಗಾಗಿ ತೊಗರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಸಕಾಲಕ್ಕೆ ಪಾವತಿಸುವ ಮೂಲಕ ರೈತರ ಕೈಹಿಡಿಯಬೇಕಿದೆ.
ಚನ್ನಬಸಪ್ಪ ಬಿರಾಡ.
ಜನವಾಡ