Advertisement
ನೋವೆಲ್ ಕೊರೊನಾ ವೈರಸ್ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ವೈರಸ್ ಆಗಿರುತ್ತದೆ. ಈ ವೈರಸ್ ಮೊದಲ ಬಾರಿಗೆ ಚೀನಾ ದೇಶದ ವುಹಾನ್ ನಗರದಲ್ಲಿ ಪತ್ತೆಯಾಗಿದೆ. ಭಾರತ, ಅಮೇರಿಕಾ, ಪಾಕಿಸ್ತಾನ, ರಷ್ಯಾ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ 25 ರಾಷ್ಟ್ರಗಳಲ್ಲಿ ನೋವೆಲ್ ಕೊರೊನಾ ವೈರಸ್ ಕಾಣಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ರೋಗದ ಕುರಿತು ಮಾಧ್ಯಮಗಳಲ್ಲಿ ಅನೇಕ ಧನಾತ್ಮಕ ಹಾಗೂ ಋಣಾತ್ಮಕ ಸುದ್ದಿಗಳು ಕೂಡ ಹರಡುತ್ತಿದ್ದು, ಕಾರಣ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಈ ರೋಗದ ಬಗ್ಗೆ ಭಯಬೇಡ ಮುಂಜಾಗ್ರತೆಯಿಂದ ಇರುವುದು ಅತ್ಯವಶ್ಯಕ. ಏಕೆಂದರೆ ಈ ರೋಗ ಬಾರದಂತೆ ತಡೆಯಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಕಾಣಿಸಿದ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆ.
Related Articles
Advertisement
ಮುಂಜಾಗ್ರತಾ ಕ್ರಮಗಳು: ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸುವುದು, ಟ್ರಿಪಲ್ ಲೇಯರ್ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಚತೆ ಹಾಗೂ ಪರಿಣಾಮಕಾರಿ ಕೈತೊಳೆಯುವುದು. ಕೆಮ್ಮುವಾಗ, ಸೀನುವಾಗ ಮಾಸ್ಕ್ ಇಲ್ಲವೇ ಕೈವಸ್ತ್ರ ಉಪಯೋಗಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಈ ರೋಗದ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಪರೀಕ್ಷಿಸುವುದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸ, ಮೊಟ್ಟೆ ಹಾಗೂ ಇತರೆ ಪ್ರಾಣೀ ಜನ್ಯ ಆಹಾರವನ್ನು ಸರಿಯಾಗಿ ಬೇಯಿಸಿ ಉಪಯೋಗಿಸುವುದು. ಅಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬೇಡಿ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು, ಹೆಚ್ಚು ಜನನಿಬೀಡ ಪ್ರದೇಶದಲ್ಲಿ ಸಂಚರಿಸುವಾಗ ರಕ್ಷಣಾತ್ಮಕ ವಿಧಾನಗಳನ್ನು ಅನುಸರಿಸಿ ಸಂಚರಿಸಬೇಕು.
ಹೆಚ್ಚಿನ ಮಾಹಿತಿಗಾಗಿ 24×7 ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ 011-23978046 ದೂರವಾಣಿ ಸಂಖ್ಯೆಗೆ ಕರೆ ಮಾಡಿಯೂ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು. ಈ ಮೇಲಿನ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ನೋವೆಲ್ ಕೊರೊನಾ ವೈರಸ್ ಅಪಾಯದಿಂದ ಪಾರಾಗಬಹುದು ಎಂದು ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.