ಬೀದರ: ಸಹಕಾರ ಕ್ಷೇತ್ರ ಹಲವು ಕ್ಷೇತ್ರಗಳನ್ನು ಒಳಗೊಂಡ ಸರಕಾರದ ಒಂದು ಭಾಗವಾಗಿದೆ. ಸಹಕಾರ ಕೇತ್ರ ಸರ್ಕಾರದ ಎಲ್ಲ ಇಲಾಖೆಗಳನ್ನು ಒಳಗೊಂಡಿದೆ. ಜನತೆಗೆ ಸೇವೆ ಸಲ್ಲಿಸಲು ಹಲವು ವಿಧಗಳಲ್ಲಿ ಅವಕಾಶವಿರುವ ಏಕೈಕ ಕ್ಷೇತ್ರವಾಗಿದೆ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಹ್ಮದ್ ಸಲಿಮುದ್ದೀನ್ ಹೇಳಿದರು.
ನಗರದ ನೌಬಾದ್ ಸಹಾರ್ದ ಸಂಸ್ಥೆಯಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಸಹಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿ ಸಹಕಾರ ಕೇತ್ರದಿಂದಾಗಿ ರೈತರಿಗೆ ಸಾಕಷ್ಟು ಸಹಾಯಗಳು ಸಿಗುತ್ತಿದ್ದು ವಿತ್ತ ಖಾತೆಯಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಹಕಾರವಿದೆ. ಗ್ರಾಮೀಣಾಭಿವೃದ್ಧಿಯಲ್ಲೂ ಸಹಕಾರ ಕ್ಷೇತ್ರವಿದೆ. ವಿಮಾ ಕ್ಷೇತ್ರದಲ್ಲಿ ರೈತರಿಗೆ ಫಸಲ್ ಬಿಮಾ ಯೋಜನೆ ಮತ್ತು ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳಾ ಅಭಿವೃದ್ಧಿಯಲ್ಲೂ ಪಾತ್ರ ವಹಿಸುತ್ತದೆ ಎಂದರು.
ದಿ. ಗುರುಪಾದಪ್ಪಾ ನಾಗಮಾರಪಳ್ಳಿಯವರು ಸಹಕಾರದ ಮಹತ್ವನ್ನು ಮನಗಂಡು ಬಲಿಷ್ಠವಾದ ಸಹಕಾರದ ವ್ಯವಸ್ಥೆಯಿಂದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಸಹಕಾರ ಕೇತ್ರದಲ್ಲಿ ಅವರಿಗಿದ್ದ ನಂಬಿಕೆ ಮತ್ತು ನಿಷ್ಠೆಗಳು ಇಂದು ಬೀದರಿಗೆ ದೇಶದಲ್ಲಿ ಮಹತ್ವದ ಸ್ಥಾನಮಾನ ಒದಗಿಸಿವೆ ಎಂಬುದು ಹೆಮ್ಮೆಯ ವಿಷಯ. ಅವರ ದೂರದೃಷ್ಟಿ ಮತ್ತು ಆದರ್ಶಗಳು ಮುಂದಿನ ಪೀಳಿಗೆಗೆ ಅನುಕರಣೀಯ. ಇದರಿಂದಾಗಿಯೇ ಬೀದರನಲ್ಲಿ ಸಹಕಾರ ಕ್ಷೇತ್ರ ಬಲಿಷ್ಠವಾಗಿದೆ. ಅವರು ಸ್ವಂತಕ್ಕೆ ಯಾವುದೇ ಸಂಸ್ಥೆ ಕಟ್ಟದೆ ಸಹಕಾರಿ ಸಂಸ್ಥೆ ನಿರ್ಮಿಸಿರುವುದು ಅವರ ನಿಸ್ವಾರ್ಥ ಸೇವೆಗೆ ಉದಾಹರಣೆಯಾಗಿದೆ ಎಂದು ಸ್ಮರಿಸಿದರು.
ಸಹಕಾರಿ ಸಂಸ್ಥೆಗಳನ್ನು ಬಲಷ್ಠಗೊಳಿಸಲು ಜನರಿಗೆ ಸಹಕಾರಿ ಶಿಕ್ಷಣ ನೀಡುವುದಕ್ಕಾಗಿ ಸಹಕಾರಿ ಯೂನಿಯನ್ ಮೂಲಕ ಸಹಾರ್ದದಂತಹ ತರಬೇತಿ ಸಂಸ್ಥೆಗಳ ಮೂಲಕ ಸಾ ಧಿಸಲಾಗಿದೆ. ತರಬೇತಿ ಸಂಸ್ಥೆಗಳು ಯಾವುದೇ ರೀತಿಯ ವ್ಯಾಪಾರಿ ಸಂಸ್ಥೆಗಳಾಗಿ ಕೆಲಸ ನಿರ್ವಹಿಸದೇ ಜನರಿಗೆ ಶಿಕ್ಷಣ ನೀಡಿ ಜಾಗೃತಿ ಮೂಡಿಸುವಲ್ಲಿ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.
ಕರ್ನಾಟಕ ಸಹಕಾರ ಮಹಾಮಂಡಳದ ನಿರ್ದೇಶಕಿ ಶಕುಂತಳಾ ಬೆಲ್ದಾಳೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಬೀದರ ಮಾದರಿ ಪ್ರಸಿದ್ಧವಾಗಿದೆ. ಬೀದರನ್ನು ಇಲ್ಲಿಯ ಜನರನ್ನು ಸ್ವ-ಸಾಮರ್ಥ್ಯದೊಂದಿಗೆ ಗುರುತಿಸಿಕೊಳ್ಳವಂತೆ ಪ್ರೇರೇಪಿಸುವುದೇ ತರಬೇತಿಯ ಉದ್ದೇಶವಾಗಿದೆ. ಮಹಿಳೆಯರೂ ಕೂಡ ಇಂದು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತಿದ್ದು ಪ್ರಗತಿ ಸಾಧಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಗಂಡನೊಂದಿಗೆ ಸಮರಸದ ಜೀವನ ಸಾಗಿಸುವುದರೊಂದಿಗೆ ಕೆಲಸದಲ್ಲೂ ಸಮಾನವಾಗಿ ಭಾಗಿಯಾಗುತ್ತಿದ್ದಾಳೆ. ಇದು ಕೌಟುಂಬಿಕ ಆರ್ಥಿಕ ಪ್ರಗತಿಗೆ ಸಹಾಯಕನಾಗುವುದು, ಆರ್ಥಿಕ ವಿಷಯಗಳಲ್ಲಿ ಮಹಿಳೆಯರು ನುರಿತವರು ಆಗಿದ್ದಾರೆ. ಖಾಸಗಿ ವ್ಯವಸ್ಥೆಗಿಂತ ಸಹಕಾರಿ ವ್ಯವಸ್ಥೆ ಅತ್ಯುತ್ತಮವಾಗಿದೆ. ಸಮಾನತೆ ಮಾತ್ರವಲ್ಲ ಸಂಪತ್ತಿನ ಹಂಚಿಕೆ ಕೂಡ ಆಗುತ್ತದೆ ಎಂದರು.
ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಮಾತನಾಡಿ, ಸಹಕಾರ ತತ್ವಗಳನ್ನು ಅನುಸರಿಸುವುದರಿಂದ ಸಹಕಾರ ಮನೋಭಾವನೆ ಬೆಳೆಯುತ್ತದೆ. ಇದರಿಂದಾಗಿ ಸಂಸ್ಥೆಗಳಲ್ಲಿ ಸಾಮರಸ್ಯ ಹೊಂದಾಣಿಕೆ ಮನೋಭಾವ ಉಂಟಾಗಿ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪಿಕೆಪಿಎಸ್ ಅಧ್ಯಕ್ಷೆ ಜಗದೇವಿ ಶಾಮರಾವ್, ಉಪಾಧ್ಯಕ್ಷ ಕಾಶಿನಾಥ, ವ್ಯವಸ್ಥಾಪಕ ಸಂತೋಷ ಪೋಲಕಪಳ್ಳಿ ಮತ್ತಿತರರು ಇದ್ದರು. ಎಸ್.ಜಿ. ಪಾಟೀಲ ಸ್ವಾಗತಿಸಿದರು. ನಾಗಶೆಟ್ಟಿ ಘೋಡಂಪಳ್ಳಿ ನಿರೂಪಿಸಿದರು. ತನ್ವಿರ ರಜಾ ವಂದಿಸಿದರು.