Advertisement

ಅಭಿವೃದ್ಧಿಯಲ್ಲಿ ‘ಸಹಕಾರ’ಪಾತ್ರ ಹಿರಿದು

12:48 PM Nov 15, 2019 | Naveen |

ಬೀದರ: ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಹಿರಿದಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಹಾಗೂ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕಿನ ಡಾ|ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರದ ಮೂಲಕ ಎಲ್ಲರ ಕಲ್ಯಾಣ ಸಾಧ್ಯವಿದೆ. ಶತಮಾನದ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವು ಇನ್ನಷ್ಟು ಬೆಳೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಗೆ ನೆರವಾಗುವ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ಕ್ಷೇತ್ರ ಹಾಸುಹೊಕ್ಕಾಗಿದೆ. ಸಕ್ಕರೆ ಉದ್ಯಮ, ಜವಳಿ ಉದ್ಯಮಗಳು ಬೆಳೆದಿರುವುದೇ ಸಹಕಾರ ಕ್ಷೇತ್ರದಲ್ಲಿ. ಗೊಬ್ಬರ ತಯಾರಿಕೆಗೆ ಹೆಸರಾದ ಇಪ್ಕೋ ಸಹಕಾರ ತತ್ವದಡಿ ನಡೆಯುತ್ತಿದೆ. ಸಹಕಾರ ಕ್ಷೇತ್ರದಲ್ಲಿನ ಬ್ಯಾಂಕ್‌ಗಳು ಅತ್ಯುತ್ತಮ ರೀತಿಯಲ್ಲಿ ನಡೆಯುತ್ತಿವೆ. ಸಹಕಾರ ತತ್ವದಡಿ ನಡೆಯುತ್ತಿರುವ ಹಾಲು ಒಕ್ಕೂಟಗಳೂ ರೈತರ ಏಳ್ಗೆಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಆರಂಭದ ದಿನಗಳಲ್ಲಿ ಹಲವು ಮಿತಿಗಳಿದ್ದವು. ಚೌಕಟ್ಟಿನ ಒಳಗೆಯೇ ಕೆಲಸ ಮಾಡುವ ಸ್ಥಿತಿ ಇತ್ತು. ಸ್ವಾಮಿನಾಥನ್‌ ವರದಿ ಮತ್ತು 2012ರ ಕಾಯ್ದೆ ತಿದ್ದುಪಡಿ ನಂತರ ಸಹಕಾರ ಕ್ಷೇತ್ರ ಹೆಚ್ಚು ಬಲಿಷ್ಠವಾಗಿದೆ. ಸ್ವಾಯತ್ತ ಸಂಸ್ಥೆಯಾಗಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಸಹಕಾರ ಕ್ಷೇತ್ರದ ಸಂಸ್ಥೆಗಳು ಬೆಳೆಯಲು ಬದ್ಧತೆ, ಕಾಳಜಿ, ಪ್ರಾಮಾಣಿಕತೆ ಬೇಕು. ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಪ್ರಾಮಾಣಿಕ, ಕಾಳಜಿಯ ಸೇವೆಯ ಫಲವಾಗಿಯೇ ಬೀದರ್‌ ಜಿಲ್ಲೆಯಲ್ಲಿ ಸಹಕಾರ ಚಳವಳಿ ಬಲಯುತವಾಗಿ ಬೆಳೆದಿದೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಬೀದರ್‌ ಮಾದರಿಯಾಗಿದೆ ಎಂದರು. ಸಹಕಾರ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಸಿದವರು ದಿ. ಗುರುಪಾದಪ್ಪ ನಾಗಮಾರಪಳ್ಳಿಯವರು. ದೇಶ ವಿದೇಶಗಳ ಆರ್ಥಿಕ ತಜ್ಞರೂ ಅಚ್ಚರಿಪಡುವ ರೀತಿಯಲ್ಲಿ ಸಹಕಾರ ಕ್ಷೇತ್ರ ಬೆಳೆದಿದೆ. ಇದರ ಶ್ರೇಯಸ್ಸು ದಿ. ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಸಲ್ಲಬೇಕು. ಕಿರು ಹಣಕಾಸು ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್‌ ಕೊಡುಗೆ ಅಪಾರವಾಗಿದೆ. ಇದನ್ನು ತಿಳಿದುಕೊಳ್ಳಲು ದೇಶದ ಎಲ್ಲರಾಜ್ಯಗಳ ಬ್ಯಾಂಕ್‌ ಅಧಿ ಕಾರಿಗಳು ಬೀದರ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪರಮೇಶ್ವರ ಮುಗಟೆ ಮಾತನಾಡಿ, ಬರುವ ವರ್ಷದಿಂದ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ “ಉಮಾಕಾಂತ ನಾಗಮಾರಪಳ್ಳಿ ಅತ್ಯುತ್ತಮ ಸಹಕಾರ ರತ್ನ’ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟಿಸಿದರು. ಮೊದಲ ಬಹುಮಾನ 11,000 ರೂ., ಎರಡನೇ ಬಹುಮಾನ 5000 ರೂ. ಮತ್ತು ಮೂರನೇ ಬಹುಮಾನ 3000 ರೂ. ನಗದು, ಪ್ರಶಸ್ತಿಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ಹೇಳಿದರು.

ಸಹಕಾರ ಸಂಘಗಳ ಉಪನಿಬಂಧಕ ವಿಶ್ವನಾಥ ಮಲಕೂಡ್‌ ಮಾತನಾಡಿ, ಸಹಕಾರ ಕ್ಷೇತ್ರವು ವಿಕಾಸದ ವೇಗ ಹೆಚ್ಚಿಸಿದೆ ಎಂದರು. ಸಹಕಾರ ಸಂಸ್ಥೆಗಳು ಬಲಾಡ್ಯವಾಗಿ ಬೆಳೆದಿದ್ದರಿಂದಲೇ ಜಿಲ್ಲೆಯ ರೈತರಿಗೆ ಸರಕಾರ ಸಾಲಮನ್ನಾ ಮತ್ತಿತರ ಯೋಜನೆಗಳಿಂದ ಹೆಚ್ಚಿನ ಅನುಕೂಲ ಆಗಿದೆ ಎಂದರು.

ಪತ್ರಕರ್ತರಾದ ಭೀಮರಾವ್‌ ಬುರಾನಪುರ, ಸುರೇಶ ನಾಯಕ್‌ ಹಾಗೂ ಅತ್ಯುತ್ತಮ ಸಾಧನೆಗಾಗಿ ರೈತರನ್ನು, ರೈತ ಮಹಿಳೆಯನ್ನು ಸತ್ಕರಿಸಿ ಗೌರವಿಸಲಾಯಿತು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಪ್ರಭಾರ ಉಪನಿರ್ದೇಶಕ ಮಹಾದೇವ ಸ್ವಾಮಿ, ಡಿಸಿಸಿ ಬ್ಯಾಂಕಿನ ಸಿಇಒ ಮಲ್ಲಿಕಾರ್ಜುನ ಮಹಾಜನ್‌, ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಯಡಮಲ್ಲೆ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಪ್ರಭಾರಿ ಶಾಖಾ ವ್ಯವಸ್ಥಾಪಕ ಪ್ರಭಾಕರ ಎನ್‌., ಎನ್‌ಎಸ್‌ಎಸ್‌ಕೆ ನಿರ್ದೇಶಕ ಶಶಿಕುಮಾರ ಪಾಟೀಲ ಸಂಗಮ್‌ ಸೇರಿದಂತೆ ಮತ್ತಿತರರು ಇದ್ದರು. ಪ್ರಧಾನ ವ್ಯವಸ್ಥಾಪಕ ಚೆನ್ನಬಸಯ್ಯ ಸ್ವಾಮಿ ಸ್ವಾಗತಿಸಿದರು.

ಒಕ್ಕೂಟದ ಸಿಇಒ ಎಚ್‌.ಆರ್‌. ಮಲ್ಲಮ್ಮ ವಂದಿಸಿದರು. ಬೀದರ್‌ ಅರ್ಬನ್‌ ಸಹಕಾರ ಬ್ಯಾಂಕ್‌ ಪರವಾಗಿ ಬ್ಯಾಂಕ್‌ ಅಧ್ಯಕ್ಷ ಮಹಮ್ಮದ್‌ ಸಲೀಮೊದ್ದಿನ್‌ ಅವರು ಸಹಕಾರ ಶಿಕ್ಷಣಕ್ಕೆ 1.27 ಲಕ್ಷ ರೂ.ಗಳ ಚೆಕ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next