ಬೀದರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮಕ್ಕೆ 32.10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಬಿಟ್ಟರೆ ಹೇಳಿಕೊಳ್ಳುವ ಯೋಜನೆಗಳನ್ನು ಪ್ರಕಟಿಸದಿರುವುದು ಜಿಲ್ಲೆಯ ಜನರಿಗೆ ಭಾರೀ ನಿರಾಸೆ ಮೂಡಿಸಿದೆ.
Advertisement
ಗ್ರಾಮ ವಾಸ್ತವ್ಯಕ್ಕೆ ಬೀದರ್ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರಗಾಲಕ್ಕೆ ಪದೆಪದೆ ತತ್ತರಿಸುತ್ತಿರುವ ಜಿಲ್ಲೆಯ ರೈತರ, ಜನ ಸಾಮಾನ್ಯರ ಸ್ಥಿತಿಗತಿ ಬದಲಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೆಜ್ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದರು.
Related Articles
Advertisement
ನೀರಾವರಿಗೆ ಅನುದಾನ: ಜಿಲ್ಲೆಯ ನೀರಾವರಿ ಯೋಜನೆಗಳಿಗಾಗಿ 800 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಭಾಷಣದಲ್ಲಿ ಹೇಳಿದರು. ಕಾರಂಜಾ ಹಾಗೂ ಸಣ್ಣ ನೀರಾವರಿ ಯೋಜನೆಗಳಿಗಾಗಿ ಹಣ ಬಿಡುಗಡೆಗೊಳಿಸಿರುವುದಾಗಿ ಕೂಡ ಹೇಳಿದ್ದು, ಈ ಯೋಜನೆಗಳು ಹೊಸ ಯೋಜನೆಗಳೇನಲ್ಲ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು. ಈ ಹಿಂದೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವುರನ್ನೇ ಮುಖ್ಯಮಂತ್ರಿಗಳು ಮತ್ತೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಬ್ರಿಮ್ಸ್ ಆಸ್ಪತ್ರೆಗೆ ಮತ್ತೆ 200 ಕೋಟಿ!: ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದು, ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡದೇ ಕಳಪೆ ಕಾಮಗಾರಿ ದುರಸ್ತಿಗೆ ಮತ್ತೆ 200 ಕೋಟಿ ರೂ. ನೀಡಲಾಗುವುದು ಎಂದು ಹೇಳಿರುವುದು ಜನರಿಗೆ ವಿಚಿತ್ರವೆನಿಸುತ್ತಿದೆ.
ಬಿಎಸ್‌ಎಸ್‌ಕೆಗೆ ಏನೂ ಇಲ್ಲ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆಧುನೀಕರಣಕ್ಕೆ ಮುಖ್ಯಮಂತ್ರಿಗಳು ಅನುದಾನ ನೀಡಬಹುದು ಎಂದು ಕಾರ್ಖಾನೆಯ ಸಿಬ್ಬಂದಿ ಭಾರೀ ನಿರೀಕ್ಷೆ ಹೊಂದಿದ್ದರು. ಆದರೆ ಮುಖ್ಯಮಂತ್ರಿಗಳ ಭಾಷಣದಲ್ಲಿ ಬಿಎಸ್‌ಎಸ್‌ಕೆ ಕಾರ್ಖಾನೆಯ ಹೆಸರೇ ತೆಗೆಯದಿರುವುದು ಕಬ್ಬು ಬೆಳೆವ ರೈತರಿಗೆ, ಕಾರ್ಖಾನೆ ಸಿಬ್ಬಂದಿಗಳಿಗೆ ಬೇಸರ ಮೂಡಿಸಿದೆ.
ಬೀದರ್ ಜಿಲ್ಲೆಗೆ ಭಾರೀ ಯೋಜನೆಗಳನ್ನು ನಿರೀಕ್ಷಿಸಿದ ಜನರಿಗೆ ಭಾರೀ ಬೇಸರ ಮೂಡಿಸಿದ್ದು, ಮುಖ್ಯಮಂತ್ರಿಗಳ ಭರವಸೆ ಉಜಳಂಬ ಗ್ರಾಮಕ್ಕೆ ಮಾತ್ರ ಸೀಮಿತವಾಯ್ತಾ? ಎಂಬ ಮಾತುಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮೀಸಿ ರೈತರ, ಸಾರ್ವಜನಿಕರ ಸಮಸ್ಯೆಗಳು ಆಲಿಸಿದ್ದಾರೆ. ರೈತರ ಬೇಡಿಕೆಗಳು ಮುಖ್ಯಮಂತ್ರಿಗೆ ತಿಳಿಸಿದ್ದು, ಅವುಗಳು ಈಡೇರಿದ್ದಾಗ ಮಾತ್ರ ಮುಖ್ಯಮಂತ್ರಿ ಇಲ್ಲಿಗೆ ಬಂದು ಗ್ರಾಮ ವಾಸ್ತವ್ಯಮಾಡಿದಕ್ಕೆ ಅರ್ಥ ಬರುತ್ತೆ. ರೈತರ ಸಾಲಮನ್ನಾ ಯೋಜನೆಗೆ ಪಡಿತರ ಚೀಟಿ ಸಮಸ್ಯೆ ಉಂಟು ಮಾಡುತ್ತಿದೆ. ಒಂದೇ ಪಡಿತರ ಚೀಟಿಹೊಂದಿದ ರೈತರ ಕುಟುಂಬ ಇಂದು ಬೇರೆಬೇರೆಯಾಗಿದ್ದಾರೆ. ತಂದೆ ಒಂದು ಕಡೆ ಆದರೆ, ತಾಯಿ ಇನ್ನೊಂದು ಕಡೆಯಾಗಿದ್ದಾರೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರ ಮಾದರಿಯಲ್ಲಿ ಎಲ್ಲಾ ರೈತರಿಗೆ ಸಾಲಮನ್ನಾ ಮಾಡುವ ಮೂಲಕ ಮಾದರಿ ಮುಖ್ಯಮಂತ್ರಿಯಾಗಬೇಕು ಎಂದು ತಿಳಿಸಲಾಗಿದೆ.ಮಲ್ಲಿಕಾರ್ಜುನ ಸ್ವಾಮಿ,
ರೈತ ಸಂಘದ ಜಿಲ್ಲಾಧ್ಯಕ್ಷ