Advertisement

ಉಜಳಂಬದಲ್ಲಿ ಸಿಎಂಗೆ ಮರಾಠಿ ಸಮಸ್ಯೆ

10:44 AM Jun 26, 2019 | Naveen |

ದುರ್ಯೋಧನ ಹೂಗಾರ
ಬೀದರ:
ಮುಖ್ಯಮಂತ್ರಿ ಕುಮಾರಸ್ವಾಮಿ ಜೂ.27ರಂದು ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳು ಆಲಿಸಲಿದ್ದಾರೆ. ಆದರೆ, ಗ್ರಾಮದಲ್ಲಿ ಬಹುತೇಕ ಮರಾಠಿ ಭಾಷಿಕರಿರುವುದರಿಂದ ಜನರ ಸಮಸ್ಯೆ ತಿಳಿಯಲು ಮುಖ್ಯಮಂತ್ರಿಗಳು ಭಾಷಾಂತರಿಸುವ ಅಧಿಕಾರಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಒಂದೆಡೆಯಾದರೆ ಗಡಿ ಭಾಗ ಎಂಬ ನಿರ್ಲಕ್ಷ್ಯ ಮತ್ತೂಂದೆಡೆ. ಕುಡಿಯುವ ನೀರು, ವಿದ್ಯುತ್‌, ನೀರಾವರಿ ಯೋಜನೆ, ಆಸ್ಪತ್ರೆ ಸಮಸ್ಯೆ ಹೀಗೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿರುವ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧವೇ ದೂರಿದರೆ, ಅಧಿಕಾರಿಗಳು ಯಥಾವತ್ತಾಗಿ ದೂರನ್ನು ತುರ್ಜುಮೆ ಮಾಡಿ ಮುಖ್ಯಮಂತ್ರಿಗಳಿಗೆ ತಿಳಿಸುತ್ತಾರಾ ಎಂಬ ಜಿಜ್ಞಾಸೆ ಗ್ರಾಮಸ್ಥರಲ್ಲಿ ಮೂಡಿದೆ.

ಸಿಎಂ ಕುಮಾರಸ್ವಾಮಿ ಅವರಿಗೆ ಮರಾಠಿ ಭಾಷೆಯಲ್ಲಿ ಮಾತಾಡಲು ಅಥವಾ ಅರ್ಥೈಸಿಕೊಳ್ಳಲು ಬರುವುದಿಲ್ಲ. ಗ್ರಾಮಸ್ಥರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಹೇಗೆ ಉತ್ತರಿಸುತ್ತಾರೆ ಎಂಬುದೇ ಯಕ್ಷಪ್ರಶ್ನೆ. ಗ್ರಾಮದಲ್ಲಿನ ಬೆರಳಣಿಕೆಷ್ಟು ಜನರು ಕನ್ನಡ, ಮರಾಠಿ, ಹಿಂದಿ ಭಾಷೆ ಸೇರಿಸಿ ಮಾತನಾಡುತ್ತಾರೆ. ಆದರೆ, ಪಕ್ಕಾ ಕನ್ನಡ ಭಾಷೆ ಆ ಗ್ರಾಮದ ಜನರಿಗೆ ಮಾತನಾಡಲು ಅಥವಾ ಅರ್ಥೈಸಿಕೊಳ್ಳಲು ಬರುವುದಿಲ್ಲ.

ಅಧಿಕಾರಿಗಳಿಗೂ ಸಮಸ್ಯೆ: ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಉಜಳಂಬ ಆಯ್ಕೆಗೊಂಡ ನಂತರ ಅನೇಕ ಬಾರಿ ಭೇಟಿ ನೀಡುತ್ತಿರುವ ಬಸವಕಲ್ಯಾಣ ಹಾಗೂ ಬೀದರ್‌ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮರಾಠಿ ಭಾಷೆ ತಿಳಿದುಕೊಳ್ಳುವುದು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. ಆ ಗ್ರಾಮದಲ್ಲಿ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಮರಾಠಿ ಭಾಷೆಯಲ್ಲಿ ಮಾತನಾಡಿ, ಇಲ್ಲವೇ ಹಿಂದಿ ಭಾಷೆಯಲ್ಲಿ ಮಾತನಾಡಿ ಎಂದು ಗ್ರಾಮಸ್ಥರು ಗದರಿಸಿದ ಪ್ರಸಂಗಗಳು ನಡೆದಿವೆ.

ಜೂ.17ರಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಉಜಳಂಬ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವಾಗ ಕನ್ನಡ ಬಿಟ್ಟು ಹಿಂದಿ ಅಥವಾ ಮರಾಠಿ ಭಾಷೆಯಲ್ಲಿ ಮಾತನಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ನಂತರ ಸಚಿವರು ಹಿಂದಿ ಭಾಷೆಯಲ್ಲಿ ಮಾತನಾಡಿ ಮುಖ್ಯಮಂತ್ರಿಗಳ ವಾಸ್ತವ್ಯ ಕುರಿತು ವಿವರಣೆ ನೀಡಿದ್ದರು.

Advertisement

ಕನ್ನಡ ಬಂದವರಿಗೆ ಮಹತ್ವ: ಸದ್ಯ ಉಜಳಂಬ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಮರಾಠಿ ಪ್ರಭಾವ ಇರುವುದರಿಂದ ಉಜಳಂಬ ಸೇರಿದಂತೆ ಸುತ್ತಲಿನ ಜನರು ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸುವ ನಿಟ್ಟಿನಲ್ಲಿ ಕನ್ನಡ ಭಾಷೆ ಬರುವ ವ್ಯಕ್ತಿಗಳನ್ನು ಗುರುತಿಸಿ ಮನವಿ ಬರೆಸಿಕೊಳ್ಳುತ್ತಿದ್ದಾರೆ. ಸಿಎಂ ಹಾಗೂ ಅಧಿಕಾರಿಗಳಿಗೆ ಮರಾಠಿ ಭಾಷೆ ಬರುವುದಿಲ್ಲ ಎಂಬ ಉದ್ದೇಶದಿಂದ ಕನ್ನಡ ಕಲಿತಿರುವ ವಿದ್ಯಾರ್ಥಿಗಳನ್ನು ಹಾಗೂ ಇತರೆ ವ್ಯಕ್ತಿಗಳಿಂದ ಸಮಸ್ಯೆಗಳ ಕುರಿತು ಪತ್ರಗಳು ಬರೆಸುತ್ತಿದ್ದಾರೆ.

ಗಡಿಯಲ್ಲಿ ಕನ್ನಡಕ್ಕೆ ಮಹತ್ವ ನೀಡಿ: ಜಿಲ್ಲೆಯ ಗಡಿ ಭಾಗದ ಜನರಲ್ಲಿ ಅಧಿಕಾರಿಗಳು ಕನ್ನಡ ಪ್ರಭಾವ ಬೀರುವ ಕೆಲಸವನ್ನು ಇಂದಿಗೂ ಮಾಡಿಲ್ಲ ಎಂಬ ಆರೋಪವನ್ನು ಮರಾಠಿ ಭಾಷಿಕರು ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸರ್ಕಾರದಿಂದ ದೊರೆಯುವ ಸೌಕರ್ಯಗಳ ಕುರಿತು ಅಧಿಕಾರಿಗಳು ಒಂದು ದಿನವೂ ಮಾಹಿತಿ ನೀಡಿಲ್ಲ. ಹೀಗಾಗಿ ಇನ್ನಾದರು ಕನ್ನಡ ಕಲರವ ಪಸರಿಸುವಂತೆ ಮಾಡಬೇಕು ಎಂಬುದು ಗ್ರಾಮಸ್ಥರು ಒತ್ತಾಯ.

ಸಿಎಂ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಮರಾಠಿ ಭಾಷೆಯಲ್ಲಿ ಸಮಸ್ಯೆ ಹೇಳಿಕೊಂಡರು ಸಹ ಅಧಿಕಾರಿಗಳು ಕನ್ನಡ ಭಾಷೆಯಲ್ಲಿ ಅನುವಾದ ಮಾಡಲಿದ್ದಾರೆ. ಮರಾಠಿ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ಡಾ| ಎಚ್.ಆರ್‌. ಮಹಾದೇವ, ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next