Advertisement

ಉಜಳಂಬದಲ್ಲಿ 4 ಸಾವಿರ ಅರ್ಜಿ ಸಲ್ಲಿಕೆ

03:10 PM Jun 28, 2019 | Naveen |

ಬೀದರ: ಉಜಳಂಬ ಗ್ರಾಮದಲ್ಲಿ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಕಾರ್ಯಕದಲ್ಲಿ ಸುಮಾರು ನಾಲ್ಕು ಸಾವಿರ ಅರ್ಜಿಗಳು ಬಂದಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಉಜಳಂಬ ಗ್ರಾಮದಲ್ಲಿ ಗುರುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

Advertisement

ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗಿದೆ. ಇನ್ನುಳಿದ ಅರ್ಜಿಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ತಕ್ಷಣವೇ ವಿಲೇವಾರಿಮಾಡಿ ಸೂಕ್ತ ಪರಿಹಾರ ಕಲ್ಪಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿನ ವಾಸ್ತವ್ಯ ರದ್ದಾಗಿಲ್ಲ. ಬದಲಾಗಿ ಮುಂದಕ್ಕೆ ಹಾಕಲಾಗಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅನುಭ ಮಂಟಪ ನಿರ್ಮಾಣ ಹಿಂದಿನ ಸರ್ಕಾರ ಅವಧಿಯಲ್ಲಿ ಘೋಷಣೆಯಾಗಿದೆ. ಮುಂದಿನ‌ ದಿನಗಳಲ್ಲಿ ಅನುದಾನ ನಿಡುವ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು.

ಉಜಳಂಬ ಗ್ರಾಮಕ್ಕೆ 32 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿವೆ. ಬೀದರ ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ನೀಡಲಾಗುವುದು. ಅಲ್ಲದೆ, ನೆರೆ ರಾಜ್ಯ ಮಹಾರಾಷ್ಟ್ರದ ತುಳಜಾಪುರನಲ್ಲಿ ದೇವಿ ದರ್ಶನಕ್ಕೆ ತೆರಳುವ ಕನ್ನಡಿಗರಿಗಾಗಿ ಕರ್ನಾಟಕ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Advertisement

ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೆ ಸ್ಪಂದಿಸಬೇಕು. ಮುಂದಿನ ದಿನಗಳಲ್ಲಿ ಮತ್ತೆ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಅರ್ಜಿಗಳ ಕುರಿತು ಸ್ಪಂದಿಸಿಲ್ಲ ಎಂಬ ದೂರುಗಳು ಬರಬಾರದು. ಅರ್ಜಿಗಳ ಇತ್ಯರ್ಥಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ಬಸವಕಲ್ಯಾಣ ಪ್ರಾಧಿಕಾರಕ್ಕೆ ಅನುದಾನ, ಕಾರಂಜಾ ಸಂತ್ರಸ್ತರ ಬೇಡಿಕೆ, ರೈತರ ಬೇಡಿಕೆಗಳ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಬೀದರ ಜಿಲ್ಲೆ ಅಭಿವೃದ್ಧಿಗಾಗಿ ಸರ್ಕಾರ ಸ್ಪಂದಿಸುತ್ತದೆ. ವಿವಿಧ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ ಎರಡು ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಕುರಿತು ಶಾಸಕ ಬಿ. ನಾರಾಯಣರಾವ್‌ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಅನುಭವ ಮಂಟಪಕ್ಕೆ ಎಷ್ಟಾದರೂ ಪರವಾಗಿಲ್ಲ ಅನುದಾನ ಘೊಷಣೆ ಮಾಡಿ ಎಂದು ಒತ್ತಾಯಿಸಿದರು. ಆದರೆ, ಮುಖ್ಯಮಂತ್ರಿಗಳು ಈ ಕುರಿತು ಯಾವುದೇ ಮಾತನಾಡದೇ ಸುದ್ದಿಗೋಷ್ಠಿ ಮುಕ್ತಾಯ ಮಾಡಿದರು.

ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಕ್ರೀಡಾ ಖಾತೆ ಸಚಿವ ರಹೀಂಖಾನ್‌, ಶಾಸಕ ಬಿ. ನಾರಾಯಣರಾವ್‌, ವಿಧಾನ ಪರಿಷತ್ತ ಸದಸ್ಯರಾದ ವಿಜಯಸಿಂಗ್‌, ಡಾ| ಚಂದ್ರಶೇಖರ ಪಾಟೀಲ ಸೇರಿದಂತೆ ಅನೇಕ ರಾಜಕೀಯ ಧುರಿಣರು ಹಾಗೂ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next