Advertisement

ಅಂಧತ್ವ ಮುಕ್ತ ಕ್ಷೇತ್ರ ನಿರ್ಮಾಣ ಗುರಿ

01:42 PM Feb 01, 2020 | |

ಬೀದರ: ಬೀದರ ದಕ್ಷಿಣ ಕ್ಷೇತ್ರವನ್ನು ಅಂಧತ್ವ ಮುಕ್ತ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪೂರ ಹೇಳಿದರು. ಸಾತೊಳಿ ಗ್ರಾಮದಲ್ಲಿ ಶುಕ್ರವಾರ ನಯೋನಿಕ್‌ ಎಸ್ಸಿಲಾರ್‌ ನೇತ್ರ ಅನುಸೇವಾ ಸಂಸ್ಥೆ ವತಿಯಿಂದ “ನಮ್ಮ ಮನೆ ಅನಗತ್ಯ ಅಂಧತ್ವ ಮುಕ್ತ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ 96 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ದೇಶದಲ್ಲೆ ಮೊದಲ ಬಾರಿಗೆ ಇಂಥದೊಂದು ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.

Advertisement

ಕಳೆದ ವರ್ಷ ಮೊದಲ ಬಾರಿಗೆ ಕಮಠಾಣಾದ ಶಾಲಾ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. ಒಟ್ಟು 2.50 ಲಕ್ಷ ಫಲಾನುಭವಿಗಳ ಪೈಕಿ ಈವರೆಗೆ 1.04 ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 8 ಸಾವಿರ ದೃಷ್ಟಿಹೀನರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಒಟ್ಟು 60 ಸಾವಿರ ಜನರಿಗೆ ಕನ್ನಡಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು. ನೇತ್ರ ಹೀನತೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿ ಆತನ ಇಡೀ ಕುಟುಂಬ ಸಮಸ್ಯೆಗೆ ಸಿಲುಕುತ್ತದೆ. ಅದರಿಂದ ಖರ್ಚು, ವೆಚ್ಚಗಳು ಸೇರಿದಂತೆ ವಿವಿಧ ಆರೋಗ್ಯ ತೊಂದರೆ ಹೆಚ್ಚುತ್ತವೆ. ಇದಕ್ಕೆ ಪರಿಹಾರ ಕಲ್ಪಿಸಲು ಕ್ಷೇತ್ರದಲ್ಲಿ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಇದರ ಲಾಭ ಪಡೆಯಬೇಕು. ಆರೋಗ್ಯ ಸಹಾಯಕರು, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ನಯೋನಿಕ್‌ ಸಂಸ್ಥೆ ನಿರ್ದೇಶಕ ಪ್ರಶಾಂತ ಮಾತನಾಡಿ, ಬೀದರ ದಕ್ಷಿಣ ಮಾದರಿ ಕ್ಷೇತ್ರವನ್ನಾಗಿ ತೆಗೆದುಕೊಂಡು ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಿಸುವ ಗುರಿ ಇದೆ. ರಾಜ್ಯದಲ್ಲಿ ಒಟ್ಟು 8 ಲಕ್ಷ ಜನರು ಅಂಧತ್ವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ. 100ರಷ್ಟು ದೃಷ್ಟಿ ಹೀನರಲ್ಲಿ ಶೇ. 66ರಷ್ಟು ಜನರಿಗೆ ಪೊರೆಯ ಸಮಸ್ಯೆಯಿದ್ದರೆ, ಶೇ. 19ರಷ್ಟು ದೃಷ್ಟಿ ಹೀನರು ಕನ್ನಡಕ ಉಪಯೋಗ ಮಾಡದ ಕಾರಣ ಅಂಧತ್ವಕ್ಕೊಳಗಾಗುವರು ಎಂದು ಹೇಳಿದರು. ಜಿಪಂ ಸದಸ್ಯ ಬಾಬುರಾವ್‌ ಮಲ್ಕಾಪುರೆ ಮಾತನಾಡಿದರು. ನಿವೃತ್ತ ಡಿಎಚ್‌ಒ ಮಾರ್ತಂಡರಾವ್‌ ಖಾಶೆಂಪೂರಕರ್‌ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ| ರಾಜಶೇಖರ ಪಾಟೀಲ, ಆರೋಗ್ಯ ಅ ಧಿಕಾರಿ ಡಾ| ನಿವೇದಿತಾ ಸೇರಿದಂತೆ
ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next