Advertisement

ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧ: ಚವ್ಹಾಣ

01:36 PM Aug 30, 2019 | Team Udayavani |

ಬೀದರ: ಹಿಂದಿನ ಸರ್ಕಾರಗಳ ನಿಷ್ಕ್ರೀಯತೆಯಿಂದ ಜಿಲ್ಲೆಯ ವಿವಿಧ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈಗ ಆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಪ್ರಭು ಚವ್ಹಾಣ ಅವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಿಂದಿನ ಸರ್ಕಾರದ ಮಂತ್ರಿಗಳು ಕೊಟ್ಟ ಭರವಸೆಗಳನ್ನು ನೂತನ ಸರ್ಕಾರದ ಅವಧಿಯಲ್ಲಿ ಈಡೇರಿಸಲಾಗುವುದು. ಹಿಂದಿನ ಎರಡು ಸರ್ಕಾರಗಳು ಉರುಳಿ ಹೋದರೂ ಕೂಡ ಬೀದರ ಜಿಲ್ಲಾ ಆಡಳಿತ ಸಂಕೀರ್ಣ ನಿರ್ಮಾಣಗೊಂಡಿಲ್ಲ. ಕನ್ನಡ ಭವನ ನಿರ್ಮಾಣಗೊಂಡಿಲ್ಲ. ನಗರದಲ್ಲಿ ಮಿನಿ ವಿಧಾನ ಸೌಧ, ಇಂಜಿನಿಯರಿಂಗ್‌ ಕಾಲೇಜು ಕಟ್ಟಡ ಸೇರಿದಂತೆ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು, ಬೀದರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡುವ ಉದ್ದೇಶ ಇದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳ ಶಾಸಕರೊಂದಿಗೆ ಸಭೆ ನಡೆಸಿ, ಯೋಜನೆಗಳ ಪಟ್ಟಿ ತಯಾರಿಸಿಕೊಂಡು ಕೆಲಸ ಮಾಡಲಾಗುವುದು. ಅಲ್ಲದೆ, ಪಕ್ಷದ ಪ್ರತಿ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಕುಡಿಯುವ ನೀರಿನ ತೀವ್ರ ಬವಣೆ ಎದುರಿಸುತ್ತಿರುವ ಔರಾದ ಪಟ್ಟಣ ಹಾಗೂ ಕ್ಷೇತ್ರಕ್ಕೆ ಶಾಶ್ವತ ಕಾಯಕಲ್ಪ ಕಲ್ಪಿಸುವ ಉದ್ದೇಶವಿದೆ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಚಿವ ಪ್ರಭು ಚವ್ಹಾಣ ಅವರ ಕೈ ಬಲಪಡಿಸಬೇಕಿದೆ. ಚವ್ಹಾಣ ಜನಪರ ಕಾಳಜಿವುಳ್ಳ ನಾಯಕರಾಗಿದ್ದು, ಪಕ್ಷ ನಿಷ್ಠೆಯಿಂದಲೇ ಇವತ್ತು ಅವರಿಗೆ ಅದೃಷ್ಟ ಒಲಿದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದರು.

Advertisement

ಪಕ್ಷದ ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಬೆಂಗಳೂರಿಗೆ ಹೋಗಿ ಬರುವುದರಲ್ಲೇ ಕಾಲಹರಣ ಮಾಡಿದ್ದಾರೆ. ಹೇಳಿಕೊಳ್ಳುವ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಆರೋಪಿಸಿದರು. ಜಿಲ್ಲಾ ಸಂಕೀರ್ಣ ಕಾಮಗಾರಿ ನಡೆಸುವುದು ಪ್ರಥಮಾದ್ಯತೆ ಆಗಿದೆ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದ್ದು ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಬೀದರ ಜಿಲ್ಲೆಯಲ್ಲೇ ಆಗಿವೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರ ಪ್ರವೇಶಿಸಿದ ಚವ್ಹಾಣ ಅವರು ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತಗಳಿಗೆ ಹೂ ಮಾಲೆ ಹಾಕಿದರು. ಅಲ್ಲದೆ, ಸಿದ್ಧಾರೂಢ ಮಠ, ಸರಸ್ವತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಮಾಜಿ ಶಾಸಕ ಸುಭಾಷ್‌ ಕಲ್ಲೂರ್‌, ಸೂರ್ಯಕಾಂತ್‌ ನಾಗಮಾರಪಳ್ಳಿ, ಡಿಕೆ ಸಿದ್ರಾಮ್‌, ನಂದಕಿಶೋರ್‌ ವರ್ಮಾ, ಶಿವರಾಜ ಗಂದಗೆ, ವಿಜಯಕುಮಾರ್‌ ಪಾಟೀಲ, ಜಗನ್ನಾಥ ಪಾಟೀಲ, ಬಾಬು ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಶಿವಾನಂದ ಮಂಠಾಳಕರ, ಜಿಪಂ ಸದಸ್ಯ ಗುಂಡುರೆಡ್ಡಿ, ಶಕುಂತಲಾ ಬೆಲ್ದಾಳೆ, ಈಶ್ವರ ಸಿಂಗ್‌ ಠಾಕೂರ್‌, ಗುರುನಾಥ ಕೊಳ್ಳುರ್‌ ಸೇರಿದಂತೆ ಅನೇಕರು ಇದ್ದರು.

ಔರಾದ: ಪಟ್ಟಣದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರಿಗೆ ಬಿಜೆಪಿ ತಾಲೂಕು ಘಟಕದಿಂದ ಕಾರ್ಯಕರ್ತರು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next