ಶಶಿಕಾಂತ ಬಂಬುಳಗೆ
ಬೀದರ: ಕಬ್ಬು ಕೃಷಿಂಗ್ ನಿಲ್ಲಿಸಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಈಗ ಶಾಶ್ವತವಾಗಿ ಬಾಗಿಲು ಮುಚ್ಚಿಕೊಳ್ಳುವ ಸ್ಥಿತಿಗೆ ತಲುಪಿದೆ. ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್‌ಎಸ್‌ಕೆಗೆ ಹಣದ ನೆರವು ನೀಡುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಎಂದು ಸಕ್ಕರೆ ಸಚಿವ ಸಿ.ಟಿ. ರವಿ ಹೇಳಿರುವುದು ಕಾರ್ಖಾನೆ ಪುನಶ್ಚೇತನ ವಿಷಯದಲ್ಲಿ ಸರ್ಕಾರ ಕೈ ಚೆಲ್ಲುವುದು ಸ್ಪಷ್ಟವಾದಂತಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದರೆ ಬಿಎಸ್ ಎಸ್‌ಕೆ ಕಾರ್ಖಾನೆಗೆ ವಿಶೇಷ ಪ್ಯಾಕೇಜ್ ಕಲ್ಪಿಸಿ ಪುನಶ್ಚೇತನ ಮಾಡುವುದಾಗಿ ಸಿಎಂ ಯಡಿಯೂರಪ್ಪ ಆದಿಯಾಗಿ ಪಕ್ಷದ ನಾಯಕರು ವಾಗ್ಧಾನ ಮಾಡಿದ್ದರು. ಆದರೆ, ಈಗ ಅಧಿಕಾರಕ್ಕೆ ಬಂದ ಮೇಲೆ ಬಾಯಿಗೆ ಬೀಗ ಹಾಕಿಕೊಂಡಿದ್ದು, ಕಾರ್ಖಾನೆಗೆ ಆರ್ಥಿಕ ನೆರವು ನೀಡುವುದು ವ್ಯರ್ಥ ಎಂಬಂಥ ನಿಲವು ಹೊಂದಿದೆ. ಇದು ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ.
ಆರು ದಶಕಗಳ ಹಿಂದೆ ಸ್ಥಾಪನೆಗೊಂಡು ರಾಜ್ಯದಲ್ಲೇ ಹಳೆಯ ಮತ್ತು ಅತ್ಯುತ್ತಮ ಕಾರ್ಖಾನೆ ಎಂದೆನಿಸಿಕೊಂಡಿದ್ದ ಬಿಎಸ್‌ಎಸ್‌ಕೆ ಈಗ ಸಾಲದ ಸುಳಿಗೆ ಸಿಲುಕಿದೆ. ಕಳೆದ ವರ್ಷ ಸಮ್ಮಿಶ್ರ ಸರ್ಕಾರ ಕಾರ್ಖಾನೆಗೆ 20 ಕೋಟಿ ರೂ. ಒದಗಿಸಿದ್ದರಿಂದ ಕೃಷಿಂಗ್ ನಡೆಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೃಷಿಂಗ್ ಸಹ ನಿಂತಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಇದರ ಗಂಭೀರತೆಯನ್ನು ಅರಿತು ಸರ್ಕಾರದ ಗಮನ ಸೆಳೆಯಬಹುದು, ತಡವಾಗಿಯಾದರೂ ಕೃಷಿಂಗ್ ಆರಂಭ ಆಗಬಹುದೆಂದು ರೈತರು ನಿರೀಕ್ಷೆ ಹೊಂದಿದ್ದರು. ಆದರೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರಗತಿ ಪರಿಶೀಲನೆ ವೇಳೆ ಸಕ್ಕರೆ ಸಚಿವ ಸಿ.ಟಿ. ರವಿ ಅವರು ಬಿಎಸ್‌ಎಸ್‌ಕೆಗೆ ಹಣಕಾಸಿನ ನೆರವು ನೀಡಿದರೂ ಪುನಶ್ವೇಚನ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ಕಾರ್ಖಾನೆಗೆ ಸರ್ಕಾರದಿಂದ ಹಣಕಾಸಿನ ಸಹಾಯ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಇದು ಕಾರ್ಖಾನೆ ವಿಷಯದಲ್ಲಿ ಜಿಲ್ಲೆಯ ಬಿಜೆಪಿ ನಾಯಕರ ಬದ್ಧತೆಯನ್ನು ತೋರಿಸಿಕೊಟ್ಟಿದೆ.
ಬಿಎಸ್‌ಎಸ್‌ಕೆ ಮೇಲೆ ಸುಮಾರು 307 ಕೋಟಿ ರೂ. ಸಾಲ ಇದೆ. ಕಾರ್ಖಾನೆಯ ಆಸ್ತಿಗಿಂತಲೂ ಸಾಲವೇ ಹೆಚ್ಚಿದೆ. ಆಧುನಿಕರಣ ಆಗದಿರುವುದು, ಭ್ರಷ್ಟಾಚಾರ ಈ ದುಸ್ಥಿತಿಗೆ ಕಾರಣ. ಹಿಂದಿನ ಸಮ್ಮಿಶ್ರ ಸರ್ಕಾರ ಪುನಶ್ಚೇತನಕ್ಕಾಗಿ ನೀಡಿರುವ 20 ಕೋಟಿ ರೂ. ಅನುದಾನದಿಂದ ಯಾವುದೇ ಲಾಭ ಆಗಲಿಲ್ಲ. ಇದು ರಾಜ್ಯದ ತೆರಿಗೆ ಹಣ, ಇದಕ್ಕೆ ಯಾರು ಜವಾಬ್ದಾರರು? ಸಾಲ ಕೊಟ್ಟರೂ ಸಹ ಯಾವುದೇ ಉದ್ಧಾರ ಆಗುವ ಲಕ್ಷಣಗಳಿಲ್ಲ.
ನಾನು ಉದ್ಧಾರ ಮಾಡುತ್ತೇನೆ ಎಂದು ಅಗತ್ಯ ಪ್ರಸ್ತಾವನೆ ಬಂದರೆ ಸರ್ಕಾರ ಅವರಿಗೆ ನೆರವು ಕೊಡುತ್ತದೆ ಎಂದು ಹೇಳುವ ಮೂಲಕ ಸಚಿವ ರವಿ ಬಿಎಸ್‌ಎಸ್‌ಕೆ ವಿಷಯದಲ್ಲಿ ಕೈ ಚಲ್ಲಿದ್ದಾರೆ. ಕಾರ್ಖಾನೆಯ ಕಾರ್ಮಿಕರು ಕಳೆದೆರಡು ವರ್ಷಗಳಿಂದ ವೇತನ ಇಲ್ಲದೇ ಪರದಾಡುತ್ತಿದ್ದಾರೆ. ಮತ್ತೂಂದೆಡೆ ಬಿಎಸ್ ಎಸ್‌ಕೆಯ ಆರ್ಥಿಕ ಸ್ಥಿತಿಯಿಂದಾಗಿ ಸಾಲ ನೀಡಿರುವ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ಗೂ ಸಹ ಅಸಲು- ಬಡ್ಡಿ ಹೇಗೆ ಬರುತ್ತದೆ ಎಂಬ ಭಯ ಕಾಡುತ್ತಿದೆ. ಈಗ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ನ ನೆರವು ಸಿಗುವುದು ಅನುಮಾನ ಮೂಡಿಸಿರುವುದು ಕಾರ್ಮಿಕರು ಮತ್ತು ಬ್ಯಾಂಕ್‌ಗಳ ಸಂಕಷ್ಟ ದುಪ್ಪಟ್ಟುಗೊಳಿಸಿದೆ.