ಬೀದರ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಸೆ.23ಕ್ಕೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ, ಈ ಯೋಜನೆಯನ್ನು ಬೀದರ ಜಿಲ್ಲೆಯಲ್ಲಿ ಸಂಪೂರ್ಣ ಅನುಷ್ಠಾನಗೊಳಿಸಬೇಕು ಎಂದು ಲೋಕಸಭೆ ಸದಸ್ಯ ಭಗವಂತ ಖೂಬಾ ಅಧಿಕಾರಿಗಳಿಗೆ ತಿಳಿಸಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸಂಪೂರ್ಣ ಗುರಿ ತಲುಪಿದ ದೇಶದ ಮೊದಲ ಜಿಲ್ಲೆ ಬೀದರ ಆಗಬೇಕು ಎಂಬುದು ತಮ್ಮ ಮಹಾದಾಸೆ ಆಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಸಹಕಾರದಿಂದ ಒಗ್ಗೂಡಿ ಕೆಲಸ ಮಾಡಿದಾಗ ಗುರಿ ಸಾಧನೆ ಮಾಡಬಹುದಾಗಿದೆ ಎಂದು ಸಲಹೆ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೀಡಿರುವ ನಿರ್ದೇಶನದಂತೆ ಆಯುಷ್ಮಾನ್ ಭಾರತ ಪಾಕ್ಷಿಕ ಕಾರ್ಯಕ್ರಮದ ಚಟುವಟಿಕೆಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಎಲ್ಲಾ ತಾಲೂಕುಗಳಲ್ಲಿ, ಜಿಲ್ಲಾ ಮತ್ತು 8 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಸರ್ಕಾರದಿಂದ ಆರೋಗ್ಯ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಇನ್ನು 58 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅತೀ ಶೀಘ್ರದಲ್ಲಿ ಸರ್ಕಾರದಿಂದ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ. ಜಬ್ಟಾರ್ ತಿಳಿಸಿದರು.
ಚುನಾಯಿತ ಪ್ರತಿನಿಧಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಒಳಗೊಂಡು ಜಾಥಾ ಕಾರ್ಯಕ್ರಮ ಆಯೋಜಿಸಲು ಯೋಜಿಸಲಾಗಿದೆ. ಇದರಲ್ಲಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಪಾಲ್ಗೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಅಧಿಕಾರಿ ಜಬ್ಟಾರ್ ಮಾಹಿತಿ ನೀಡಿದರು.
ಕರಪತ್ರಗಳು ಮತ್ತು ಬ್ಯಾನರ್‌ಗಳನ್ನು ಮುದ್ರಿಸಿ ಜನಸಂದಣಿ ಸ್ಥಳಗಳಲ್ಲಿ, ಸಂತೆ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು ಎಂದು ಸಂಸದ ಖೂಬಾ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಮುಖ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳ ಬಳಿ ಗೋಡೆ ಬರಹ ಬರೆದು ಪ್ರಚಾರ ಮಾಡಬೇಕಿದೆ ಎಂದುಆಯುಷ್ಮಾನ್ ಭಾರತ ಯೋಜನೆಯ ಜಿಲ್ಲಾ ಕೋ ಆರ್ಡಿನೇಟರ್ ನಂದಕುಮಾರ ಸಂಸದರಿಗೆ ಮಾಹಿತಿ ನೀಡಿದರು.