ಬೀದರ: ಕಲ್ಯಾಣ ಕರ್ನಾಟಕದ ಹೆಮ್ಮೆ ಎನಿಸಿಕೊಂಡಿರುವ ವಚನ ವಿಜಯೋತ್ಸವದ ಅಂಗವಾಗಿ ಬಸವ ಸೇವಾ ಪ್ರತಿಷ್ಠಾನದಿಂದ ಕೊಡಮಾಡುವ 2020ನೇ ಸಾಲಿನ “ಗುರು ಬಸವ ಪುರಸ್ಕಾರ’ವನ್ನು ಖ್ಯಾತ ವಿಜ್ಞಾನಿ, ಇಸ್ರೋ ಅಧ್ಯಕ್ಷ ಕೆ. ಶಿವನ್ ಅನುಪಸ್ಥಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ| ಎ.ಎಸ್. ಕಿರಣಕುಮಾರ ಅವರಿಗೆ ಪ್ರದಾನ ಮಾಡಲಾಯಿತು.
ನಗರದ ಬಸವಗಿರಿ ಪರಿಸರದಲ್ಲಿ ರವಿವಾರ ನಡೆದ 17ನೇ ವಚನ ವಿಜಯೋತ್ಸವದ ಮೂರನೇ ದಿನದ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಫಲಕ ಮತ್ತು 50,000 ರೂ. ನಗದು ಮೊತ್ತದ ಗೌರವಧನವನ್ನು ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಮತ್ತು ಅಕ್ಕ ಡಾ| ಗಂಗಾಂಬಿಕೆ ನೇತೃತ್ವದಲ್ಲಿ ಕಿರಣಕುಮಾರ ಅವರ ಹಣೆಗೆ ವಿಭೂತಿ ಹಚ್ಚಿ, ಪುಷ್ಟಮಾಲೆಯೊಂದಿಗೆ ಬಸವ ಪುತ್ಥಳಿಯನ್ನು ನೀಡುವ ಮೂಲಕ ಅಭಿನಂದಿಸಲಾಯಿತು.
ಭಾರತೀಯ ಬಾಹ್ಯಾಕಾಶ ಸಂಶೋಧನೆ ಮೂಲಕ ಚಂದ್ರಯಾನ ಯೋಜನೆ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಂಶೋಧನೆ ಮತ್ತು ಅವಿಷ್ಕಾರಗಳನ್ನು ಪರಿಗಣಿಸಿ ಡಾ| ಶಿವನ್ ಅವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಕಿರಣಕುಮಾರ, ಬಸವಣ್ಣ ಸಾರಿದ ಕಾಯಕದ ಸಿದ್ಧಾಂತದ ತಳಹದಿಯಲ್ಲಿ ಇಸ್ರೋ ಸಂಸ್ಥೆ ಕೆಲಸ ಮಾಡುತ್ತಿದ್ದು, ಸಮಾಜಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದೆ. ಸಂಸ್ಥೆ ಮತ್ತು ಅಧ್ಯಕ್ಷ ಡಾ| ಶಿವನ್ ಅವರು ಕೈಗೊಂಡಿರುವ ಕಾರ್ಯ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಿರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು.
ಪ್ರತಿಷ್ಠಿತ ಗುರುಬಸವ ಪ್ರಶಸ್ತಿಯನ್ನು ಈವರೆಗೆ ಕೇಂದ್ರದ ಮಾಜಿ ಗೃಹ ಸಚಿವ ಡಾ| ಬೂಟಾಸಿಂಗ್, ಮಾಜಿ ಸಿಎಂ ಧರ್ಮಸಿಂಗ್, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮೂಢನಂಬಿಕೆ ವಿರೋಧಿ ಹೋರಾಟದಲ್ಲಿ ಹುತಾತ್ಮರಾದ ನರೇಂದ್ರ ದಾಬೋಲಕರ, ಸುಪ್ರಿಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ| ಶಿವರಾಜ ಪಾಟೀಲ, ಮಹಾರಾಷ್ಟ್ರದ ಖ್ಯಾತ ಸಮಾಜ ಸೇವಕರಾದ ಡಾ| ಪ್ರಕಾಶ ಆಮ್ಟೆ ಮತ್ತು ಡಾ| ಮಂದಾಕಿನಿ ಆಮ್ಟೆ ದಂಪತಿ, ಖ್ಯಾತ ನಟ ನಾನಾ ಪಾಟೇಕರ್ ಮತ್ತು ಡಾ| ಖಾದರ್ ಮೈಸೂರು ಅವರಿಗೆ ಪ್ರದಾನ ಮಾಡಲಾಗಿದೆ.
ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು,
ಕೂಡಲಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮೀಜಿ, ಸಾಹಿತಿ ರಂಜಾನ್ ದರ್ಗಾ, ಗುರುನಾಥ ಕೊಳ್ಳೂರು, ಧನರಾಜ ತಾಳಂಪಳ್ಳಿ, ಬಸವರಾಜ ಬುಳ್ಳಾ, ಸುರೇಶ ಚನಶೆಟ್ಟಿ, ಚಂದ್ರಕಾಂತ ಹೆಬ್ಟಾಳೆ, ರಮೇಶ ಮಠಪತಿ ಪಾಲ್ಗೊಂಡಿದ್ದರು.