Advertisement

ಅಚಲ ಪ್ರಯತ್ನಕ್ಕೆ ಯಶಸ್ಸು

12:34 PM Aug 11, 2019 | Team Udayavani |

ಬೀದರ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಿರಂತರವಾಗಿ ಸಾಧನೆ ಮಾಡಿದಾಗ ಮಾತ್ರ ವಿಜ್ಞಾನಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಜ ಪಾಟೀಲ ಹೇಳಿದರು.

Advertisement

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರೌಢ ಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಯುವ ವಿಜ್ಞಾನಿ ಸ್ಪರ್ಧೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇರಬೇಕು. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಅಚಲವಾದ ಮನಸ್ಸಿನಿಂದ ಸತತವಾಗಿ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ನಿಮ್ಮ ಅಂಗೈಯಲ್ಲಿರುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಬುರಾವ್‌ ದಾನಿ ಮಾತನಾಡಿ, ಹಗಲು ರಾತ್ರಿ ಅಧ್ಯಯನ ನಡೆಸಿ ಹೆಸರು ಗಳಿಸಿದ ವಿಜ್ಞಾನಿಗಳ ಆದರ್ಶಗಳನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಅವರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಒಂದಿಷ್ಟು ಸಾಧನೆಯೆಡೆಗೆ ಸಾಗಲು ಸ್ಫೂರ್ತಿ ಸಿಗುತ್ತದೆ. ಜೀವನದಲ್ಲಿ ಸಾಧನೆ ಮಾಡಬೇಕಾದರ ನಿಗದಿತ ಗುರಿ ಇರಬೇಕು ಎಂದು ಹೇಳಿದರು.

ಆರ್‌ಎಂಎಸ್‌ಎ ಸಹಾಯಕ ಸಮನ್ವಯಾಧಿಕಾರಿ ಗುಂಡಪ್ಪ ಹುಡಗೆ ಮಾತನಾಡಿ, ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ತಪ್ಪದೇ ಭಾಗವಹಿಸಬೇಕು. ಗೆಲ್ಲಲೇಬೇಕು ಎಂಬುದು ತಪ್ಪಲ್ಲ. ಆದರೆ, ಅದು ಕೈತಪ್ಪಿದರೂ ಕೂಡ ಮತ್ತೆ ಪ್ರಯತ್ನ ಮಾಡುವ ಛಲ ಇರಬೇಕು. ಸೋಲು ಗೆಲುವು ಜೀವನದಲ್ಲಿ ಸಹಜವಾಗಿ ಬರುವಂತಹವು. ಅವುಗಳನ್ನು ಮೆಟ್ಟಿ ನಿಂತು ಗೆಲುವಿನೆಡೆಗೆ ಸಾಗುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಠಲದಾಸ ಪ್ಯಾಗೆ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಗುರು ಸಂಜುಕುಮಾರ ಹೆಗಡೆ ಮಾತನಾಡಿದರು. ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಕಲಾಲ್ ದೇವಿಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಥಮ ಬಹುಮಾನ ಅಪ್ಪುಗಣೇಶ ಗುರುನಾನಕ ಪ್ರೌಢ ಶಾಲೆ ಬೀದರ ಇವರಿಗೆ ರೂ. 5000 ನಗದು ಮತ್ತು ಯುವ ವಿಜ್ಞಾನಿ ಪ್ರಮಾಣ ಪತ್ರ ವಿತರಿಸಲಾಯಿತು.

ದ್ವಿತೀಯ ಬಹುಮಾನ ಸ್ನೇಹ ಮಿಲೇನಿಯಂ ಪಬ್ಲಿಕ್‌ ಸ್ಕೂಲ್ ಬೀದರ ಇವರಿಗೆ ರೂ. 3000 ನಗದು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ತೃತೀಯ ಬಹುಮಾನ ಕೃಷ್ಣ ಆದರ್ಶ ವಿದ್ಯಾಲಯ ಜನವಾಡಾ ರೂ. 2000 ನಗದು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಅಂಬೇಡ್ಕರ್‌ ತತ್ವ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಸಂಜೀವಕುಮಾರ ಸ್ವಾಮಿ, ಕ.ರಾ.ವಿ.ಪ. ಸಮಿತಿಯ ಸದಸ್ಯರಾದ ಮಹ್ಮದ್‌ ರಫಿ ತಾಳಿಕೋಟಿ, ಉಪನ್ಯಾಸಕಿ ನಾಗವೇಣಿ ಸೇರಿದಂತೆ ಅನೇಕರು ಇದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next