ಬೀದರ: ಹಿಂದುಳಿದ ಬೀದರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ, ಅಗತ್ಯ ಅನುದಾನ ಘೋಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮತ್ತು ಸಂಸದ ಭಗವಂತ ಖೂಬಾ ನೇತೃತ್ವದ ಜಿಲ್ಲೆಯ ಪ್ರಮುಖರ ನಿಯೋಗ ಒತ್ತಾಯಿಸಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸೋಲಾರ್ ಪಾರ್ಕ್: ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಔರಾದ ತಾಲೂಕಿನಲ್ಲಿ 2.50 ಸಾವಿರ ಮೇಘಾ ವ್ಯಾಟ್ ಸಾಮರ್ಥ್ಯದ ಸೋಲಾರ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕೆ 15 ಸಾವಿರ ಎಕರೆ ಭೂಮಿ ಅಗತ್ಯವಿದೆ. ಕ್ಷೇತ್ರದ ರೈತರೊಂದಿಗೆ ಭೂಮಿ ಗುರುತಿಸುವ ವ್ಯವಸ್ಥೆ ಮಾಡುತ್ತಿದ್ದು, ಈ ಭೂಮಿಗೆ ಲೀಸ್ ಆಧಾರದ ಮೇಲೆ ಹೆಚ್ಚು ಮೊತ್ತವನ್ನು ರೈತರಿಗೆ ನೀಡಲು ಹಾಗೂ ಇನ್ನಿತರೆ ಉತ್ತೇಜನಗಳನ್ನು ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಕಾರಂಜಾ ಜಲಾಶಯದಿಂದ ಔರಾದ ಪಟ್ಟಣ ಸೇರಿದಂತೆ ಮಾರ್ಗ ಮಧ್ಯದ 17 ಹಳ್ಳಿಗಳಿಗೆ ಪೈಪ್ ಲೈನ್ ಮುಖಾಂತರ ಶಾಶ್ವತ$ಸಂಯುಕ್ತ ಕುಡಿಯುವ ನೀರು ಸರಬರಾಜು ಯೋಜನೆಗೆ ಅಗತ್ಯ ಅನುದಾನ ಕಾಯ್ದಿರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಸಂಕೀರ್ಣ: ಬೀದರ ಜಿಲ್ಲಾಡಳಿತ ಕಚೇರಿಯು ಈಗಾಗಲೇ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಹಾಗಾಗಿ ನಗರದ ನೌಬಾದ್‌ನ ಕಂದಾಯ ಇಲಾಖೆಗೆ ಸೇರಿದ 28 ಎಕರೆ ಜಮೀನಿನಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಕಟ್ಟಡ ನಿರ್ಮಿಸಲು ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಬಜೆಟ್‌ನಲ್ಲಿ 75 ಕೋಟಿ ರೂ. ಅನುದಾನ ಮೀಸಲಿರಿಸಬೇಕು ಎಂದು ಕೋರಿದ್ದಾರೆ.
ಅನುಭವ ಮಂಟಪ: ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 600 ಕೋಟಿ ರೂ. ಗಳಲ್ಲಿ 50 ಕೋಟಿ ರೂ.ಮಂಜೂರಾಗಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಈ ಯೋಜನೆಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸಬೇಕು ಹಾಗೂ ಬೀದರನಲ್ಲಿ ಜರುಗುವ ಬಸವ ಉತ್ಸವಕ್ಕೆ ಅನುದಾನ ಮೀಸಲಿಡಬೇಕು. ಜಿಲ್ಲೆಗೆ ಘೋಷಣೆ ಆಗಿರುವ “ಸೆಂಟ್ರಲ್ ಪ್ಲಾಸ್ಟಿಕ್ ಮತ್ತು ಇಂಜಿನಿಯರಿಂಗ್ ಟೆಕ್ನಲಾಜಿ ಕಾಲೇಜು’ ಪ್ರಾರಂಭಕ್ಕಾಗಿ ಕನಿಷ್ಟ 10 ಕೋಟಿ ಕಾಯ್ದಿರಿಸಬೇಕು. ಉತ್ತರ ಮತ್ತು ದಕ್ಷಿಣ ಭಾರತ ಪ್ರಯಾಣದ ಅಂತರ ಕಡಿಮೆಯಾಗಿರುವ ಬೀದರ- ನಾಂದೇಡ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಮುಗಿದು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸದರಿ ಯೋಜನೆಗೆ ರಾಜ್ಯದ ಶೇ. 50ರಷ್ಟು ಪಾಲುದಾರಿಕೆ ಹಣವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆಗಳ ಆಧುನಿಕರಣ: ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರಿಗೆ ವಿಶೇಷ ಅನುದಾನ ಒದಗಿಸಿ ಶಾಶ್ವತ ಪರಿಹಾರ ರೂಪಿಸಬೇಕು. ಬೀದರ ನಗರದ ಅಂತರ್ಜಲ ಮಟ್ಟ ಹೆಚ್ಚಿಸಲು ಬೀದರ ಸುತ್ತಲಿನ ಕೆರೆಗಳ ಒತ್ತುವರಿ ತೆರವುಗೊಳಿಸಿ ಪುನಶ್ಚೇತನಕ್ಕೆ ಅನುದಾನ ಒದಗಿಸಬೇಕು. ಕಾರಂಜಾ ಜಲಾಶಯದಿಂದ ಹುಮನಾಬಾದವರೆಗೆ ಏತ ನೀರಾವರಿ ಯೋಜನೆ’ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡುಬೇಕು. ಜಿಲ್ಲೆಯಲ್ಲಿ ಒಟ್ಟು 14 ಕೆರೆಗಳ ಆಧುನಿಕರಣಕ್ಕಾಗಿ 1910.00 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ “ಕೃಷಿ ಉಪಕರಣಗಳ ಕಾರ್ಖಾನೆ ವಲಯ’ ಸ್ಥಾಪಿಸಿ ಸ್ಥಳೀಯ ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು. ಜಿಲ್ಲೆಯಲ್ಲಿ ಅನಿಲ ಆಧಾರಿತ ಪವರ್ ಪ್ರೊಜೆಕ್ಟ್ ಹಾಗೂ ಥರ್ಮಲ್ ಇಂಡಸ್ಟ್ರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲೇ ಅತೀ ಹೆಚ್ಚು ಸೋಯಾ ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದ್ದು, ಅದರ ಆಧಾರಿತ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.