ಬೀದರ: ನಿಜಶರಣ ಅಂಬಿಗ ಚೌಡಯ್ಯನವರ ಜನ್ಮ ಕ್ಷೇತ್ರ ನರಸೀಪುರದಲ್ಲಿ ಜ.14 ಮತ್ತು 15ರಂದು ಅಂಬಿಗರ ಚೌಡಯ್ಯನವರ 900ನೇ ಜಯಂತ್ಯುತ್ಸವ, ಶರಣರ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಶ್ರೀ ಶಾಂತಮುನಿ ಮಹಾಸ್ವಾಮಿಗಳ 4ನೇ ಸ್ಮರಣೋತ್ಸವ ಆಯೋಜಿಸಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಸವಣ್ಣನ ನೇತೃತ್ವದ ವಚನ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಅಂಬಿಗರ ಚೌಡಯ್ಯನವರು ಬಸವಕಲ್ಯಾಣದ ತ್ರಿಪುರಾಂತ ಕೆರೆ ಅಭಿವೃದ್ಧಿ ಕಾರ್ಯ ಮಾಡಿದ್ದರು. ಜನ್ಮ ಸ್ಥಳ ನರಸೀಪುರದಲ್ಲಿ ನಡೆಯುವ ಈ ಉತ್ಸವದಲ್ಲಿ ನಾಡಿನ ಮಠಾಧಿಧೀಶರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು.
ರಾಜ್ಯದ ವಿವಿಧೆಡೆಯಿಂದ ಸುಮಾರು 5 ಲಕ್ಷ ಸಮಾಜ ಬಾಂಧವರು ಸೇರಲಿದ್ದಾರೆ ಎಂದರು. ಜ.14ರಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರುವುದು. ನಂತರ ಗುರುಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿವಿಧ ಕಲಾ ತಂಡಗಳಿಂದ ರಾತ್ರಿ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ನಡೆಯಲಿದೆ. 15ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ, 8.30ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ, ಬೆಳಗ್ಗೆ 9.30ಕ್ಕೆ ನಾಡಿದ ವಿವಿಧ ಮಠಾಧಿಧೀಶರ ಸಮ್ಮುಖದಲ್ಲಿ ಧರ್ಮ ಸಭೆ ಜರುಗುವುದು. ಸಂಜೆ 5.30ಕ್ಕೆ ಗ್ರಂಥ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ನಿಗಮದ ಮಾಜಿ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಚೌಡಯ್ಯನವರ ಉತ್ಸವದಲ್ಲಿ ಜಿಲ್ಲೆಯಿಂದ ಸಮಾಜದ ಸುಮಾರು 5 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಟೋಕರಿ ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಗುರೂಜಿ, ಮಠದ ಬಸವರಾಜ ಸಪ್ಪನಗೊಳ, ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಸುನೀಲ ಖಾಶೆಂಪೂರ, ಶಿವರಾಜ ಔರಾದ, ಮಾರುತಿ ಇದ್ದರು.