ಬೆಂಗಳೂರು: ನಿವೇಶನವನ್ನು ತನ್ನದಾಗಿಸಿಕೊಳ್ಳುವ ಸಲುವಾಗಿ ಪತ್ನಿಯ ಸಹೋದರಿಯನ್ನೇ ಕೊಲೆಗೈದಿದ್ದ ಆರೋಪಿ ವಿವೇಕ್ ಅಗರ್‌ವಾಲ್‌ನನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸನ್ ಸಿಟಿ ನಿವಾಸಿ ಬಿಎಚ್‌ಇಎಲ್ ಉದ್ಯೋಗಿ ಎಸ್.ಅನುಶ್ರೀ (32) ಎಂಬವರನ್ನು ಫೆ.15ರಂದು ರಾತ್ರಿ ಕತ್ತು ಹಿಸುಕಿ ಕೊಲೆಗೈದಿದ್ದ ಆರೋಪಿ ವಿವೇಕ್ ಅಗರ್‌ವಾಲ್ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಕೆಂಗೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
15 ದಿನಗಳ ಹಿಂದೆಯೇ ಸಂಚು?: ಮೃತ ಅನುಶ್ರೀ ಬಿಡದಿ ಸಮೀಪ ನಿವೇಶನ ಹೊಂದಿದ್ದರು. ಅದನ್ನು ಕಡಿಮೆ ಮೊತ್ತಕ್ಕೆ ತಾನೇ ತೆಗೆದುಕೊಳ್ಳಲುಯತ್ನಿಸಿದ್ದ ವಿವೇಕ್ ನಿರೀಕ್ಷೆ ಫಲಿಸಿರಲಿಲ್ಲ. ಅನುಶ್ರೀ ನಿವೇಶನವನ್ನು ಬೇರೊಬ್ಬರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.ಈ ವಿಚಾರ ತಿಳಿದಿದ್ದ ವಿವೇಕ್, ಅನುಶ್ರೀ ಅವರ ಬಳಿಯಿದ್ದ ನಿವೇಶನ ಹೇಗಾದರೂ ಸರಿ ತನ್ನದಾಗಿಸಿಕೊಳ್ಳಲು ಸಂಚುರೂಪಿಸಿದ್ದ.
ಹೀಗಾಗಿ ನಗರದ ಬೇರೆಡೆ ವಾಸಿಸುತ್ತಿದ್ದ ಅನುಶ್ರೀ ಹಾಗೂ ಅವರ ಪತಿ ಸನತ್ ಅವರನ್ನು ಬಲವಂತ ಮಾಡಿ ಸನ್‌ಸಿಟಿಯಲ್ಲಿಯೇ ಬಂದು ನೆಲೆಸುವಂತೆ ಒತ್ತಾಯಿಸಿದ್ದ. ಹೀಗಾಗಿ ಕಳೆದ 15 ದಿನಗಳ ಹಿಂದಷ್ಟೇ ವಿವೇಕ್ ವಾಸಿಸುವ ಮೂರಂತಸ್ತಿನ ಕಟ್ಟಡದ ಮೂರನೇ ಮಹಡಿಯ ಮನೆಗೆ ಸ್ಥಳಾಂತರಗೊಂಡಿದ್ದರು. ಅನುಶ್ರೀಯನ್ನು ಕೊಲೆಗೈಯುವ ಸಂಚಿನಿಂದಲೇ ಅವರನ್ನು ಕಟ್ಟಡಕ್ಕೆ ಬಂದು ನೆಲೆಸುವಂತೆ ಆರೋಪಿ ಒತ್ತಾಯಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವೈರ್‌ನಿಂದ ಬಿಗಿದು ಸದ್ದಿಲ್ಲದೆ ಎಸ್ಕೇಪ್?: ಫೆ.15ರಂದು ಸಂಜೆ ಏಳು ಗಂಟೆ ಸುಮಾರಿಗೆ ಆರೋಪಿ ಕಾರ್ಯ ನಿಮಿತ್ತ ಹೊರಗೆ ಹೋಗುವುದಾಗಿ ಪತ್ನಿ ನೇತ್ರಾವತಿಗೆ ತಿಳಿಸಿದ್ದ ವಿವೇಕ್, ಮೂರನೇ ಮಹಡಿಯಲ್ಲಿರುವ ಅನುಶ್ರೀ ಅವರ ಮನೆಗೆ ತೆರಳಿ ಒಳಗಿನಿಂದ ಬಾಗಿಲು ಹಾಕಿಕೊಂಡು ಆಕೆಯ ಕತ್ತನ್ನು ವೈರ್‌ನಿಂದ ಬಿಗಿದು ಕೊಲೆಗೈದಿದ್ದ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಕೆಲಸಕ್ಕೆ ಹೋಗಿದ್ದ ಅನುಶ್ರೀ ಪತಿ ಸನತ್ ರಾತ್ರಿ 8.30ರ ಸುಮಾರಿಗೆ ಹಲವು ಕರೆ ಮಾಡಿದರೂ ಅನುಶ್ರೀ ಕರೆ ಸ್ವೀಕರಿಸಿಲ್ಲ.
ಹೀಗಾಗಿ ಪತ್ನಿಯ ಸಹೋದರಿ ನೇತ್ರಾವತಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ನೇತ್ರಾವತಿ ಅವರು ಮೂರನೇ ಮಹಡಿಗೆ ತೆರಳಿ ನೋಡಿದಾಗ ಅನುಶ್ರೀ ಮನೆ ಬಾಗಿಲು ಹಾಕಲಾಗಿತ್ತು. ಅನಂತರ ಕಿಟಕಿ ಮೂಲಕ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಗಾಬರಿಗೊಂಡ ನೇತ್ರಾವತಿ ಕೂಡಲೇ ಸನತ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆಗೆ ಬಂದ ಸನತ್ ಪತ್ನಿ ಮೃತಪಟ್ಟಿರುವುದನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದರು.