Advertisement

ಭವಾನಿ ರೇವಣ್ಣ ಆವಾಜ್‌ ಕೈ ನಾಯಕರಿಗೆ ತಲೆಬಿಸಿ

06:00 AM Sep 30, 2018 | |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ಹಾಕಿದ “ಆವಾಜ್‌’ ರಾಜಧಾನಿ ಬೆಂಗಳೂರು ತಲುಪಿದೆ.

Advertisement

ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ನಾವು (ಜೆಡಿಎಸ್‌)ಯಾರ ಮನೆಬಾಗಿಲಿಗೂ ಹೋಗಿಲ್ಲ. ಮನೆ ಬಾಗಿಲಿಗೆ ಬಂದವರು ನೀವೇ (ಕಾಂಗ್ರೆಸ್‌) ಎಂದು ಹೇಳಿರುವ ಭವಾನಿ ರೇವಣ್ಣ ಅವರ ಮಾತುಗಳಿಗೆ ಕಡಿವಾಣ ಹಾಕಿ ಎಂದು ಹಾಸನ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಕೆಪಿಸಿಸಿಗೆ ದೂರು ತಲುಪಿಸಿದ್ದಾರೆ.

ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ನಮ್ಮ  ರಕ್ಷಣೆಗೆ ಬನ್ನಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಆಡಿದ ಮಾತುಗಳನ್ನೇ ಜಿಲ್ಲೆಯಲ್ಲಿ ಎಲ್ಲ ಜೆಡಿಎಸ್‌ ನಾಯಕರು ಸಮಯ ಸಿಕ್ಕಾಗಲೆಲ್ಲಾ ಆಡುತ್ತಾರೆ. ಕಾಂಗ್ರೆಸ್‌ ಪಕ್ಷ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದರೂ ಹಾಸನದ ಮಟ್ಟಿಗೆ ಜೆಡಿಎಸ್‌ನದೇ ಸಾಮ್ರಾಜ್ಯವಾಗಿದೆ. ಹೀಗಾದರೆ ಪಕ್ಷ ಸಂಘಟನೆ ಕಷ್ಟ ಎಂದು ಮಾಜಿ ಸಚಿವ ಎ.ಮಂಜು ಸಹಿತ ಜಿಲ್ಲಾ ಕಾಂಗ್ರೆಸ್‌ನ ನಾಯಕರು ಸಿದ್ದರಾಮಯ್ಯ ಅವರ ಮುಂದೆ ಅವಲತ್ತುಕೊಂಡಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ  ಕಾಂಗ್ರೆಸ್‌16 ಸ್ಥಾನ ಗಳಿಸಿದೆ. ಮೀಸಲಾತಿ ಅನ್ವಯ ಎಸ್‌ಟಿಗೆ ಅಧ್ಯಕ್ಷ ಸ್ಥಾನ ಬಂದಿದ್ದರಿಂದ ಆ ವರ್ಗದವರು ಜೆಡಿಎಸ್‌ನಲ್ಲಿ ಇರದ ಕಾರಣ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಪಡೆದಿದೆ. ಆದರೆ,  ಉಪಾಧ್ಯಕ್ಷ ಸೇರಿ ಐದು ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನ ಜೆಡಿಎಸ್‌ ಇಟ್ಟುಕೊಂಡಿದೆ. 35 ಸ್ಥಾಯಿ ಸಮಿತಿ ಸದಸ್ಯರ ಪೈಕಿ ಕಾಂಗ್ರೆಸ್‌ಗೆ ಕೇವಲ 9  ಸ್ಥಾನ ಕೊಟ್ಟಿದೆ.

ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಅದಲು ಬದಲು ಮಾಡಿಕೊಳ್ಳುತ್ತೇವೆ ಎಂದರೂ ಅವಕಾಶ ಕೊಡದೆ ಭವಾನಿ ರೇವಣ್ಣ ಅವರು ಕಾಂಗ್ರೆಸ್‌ ಸದಸ್ಯರಿಗೆ ಧಮ್ಕಿ ಹಾಕಿದ್ದಾರೆ. ಇದು ಸರಿಯಾ ಎಂದು ಪ್ರಶ್ನಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರ ಮಾತು ಏನೂ ನಡೆಯುವುದಿಲ್ಲ. ಯಾವ ಕಾರ್ಯಕ್ರಮಗಳಿಗೂ ಕಾಂಗ್ರೆಸ್‌ನವರಿಗೆ  ಆಹ್ವಾನವೂ ಇರುವುದಿಲ್ಲ. ಇಡೀ ಜಿಲ್ಲೆ ಜೆಡಿಎಸ್‌ಮಯವಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಕಷ್ಟವಾಗುತ್ತದೆ ಎಂದು ನಿಷ್ಠುರವಾಗಿಯೇ ಹೇಳಿದ್ದಾರೆ.

ಯಾರು ಮಧ್ಯಪ್ರವೇಶಕ್ಕೆ ಬರುತ್ತಿಲ್ಲ
ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಈ ಕುರಿತು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ಗಮನಕ್ಕೂ ತಂದು ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಹಾಸನ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಇವರೂ ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಂತೂ ಹಾಸನ ವಿಚಾರದಲ್ಲಿ ನಾನೇನೂ ಮಾಡಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆದರೂ ಒಮ್ಮೆ ರೇವಣ್ಣ ಜತೆ ಮಾತನಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಗೌಡರ ಕಿವಿಮಾತು
ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು,  ಸಚಿವ ಎಚ್‌.ಡಿ.ರೇವಣ್ಣ ಸೇರಿದಂತೆ ಹಾಸನ ಜಿಲ್ಲೆಯ ಜೆಡಿಎಸ್‌ ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಸಮ್ಮಿಶ್ರ ಸರ್ಕಾರ ಆದ್ದರಿಂದ ಅನುಸರಿಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ನಮ್ಮಿಂದ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಇದೇ ಕಾರಣಕ್ಕೆ  ಈ ಬಾರಿ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಿಗೆ ಕಾಂಗ್ರೆಸ್‌ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಹಿಂದಿನ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ಅವಕಾಶ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ.

ಅಧ್ಯಕ್ಷರನ್ನು ಇಳಿಸ್ತಾರಾ?
ಈ ಮಧ್ಯೆ, ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು 30 ತಿಂಗಳ ನಂತರ ಅವಿಶ್ವಾಸ ಮಂಡಿಸಿ ಕೆಳಗಿಳಿಸಿ ಅಧ್ಯಕ್ಷ ಸ್ಥಾನ ಜೆಡಿಎಸ್‌ ಪಡೆಯಲು ಕಾರ್ಯತಂತ್ರ ರೂಪಿಸಲಾಗಿದೆ. ಅಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದ್ದು ಎಸ್‌ಟಿ ವರ್ಗದವರು ಇಲ್ಲದಿದ್ದರೆ ಎಸ್‌ಟಿ ವರ್ಗಕ್ಕೆ ಮೀಸಲು ನಿಗದಿಪಡಿಸುವ ಅವಕಾಶವಿದೆ. ಜೆಡಿಎಸ್‌ನಲ್ಲಿ ಎಸ್‌ಸಿ ವರ್ಗದ ಸದಸ್ಯರು ಇರುವುದರಿಂದ ಅಧ್ಯಕ್ಷ ಸ್ಥಾನ ಪಡೆಯಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಹಾಸನಕ್ಕೆ ಸೀಮಿತವಾಗಿಲ್ಲ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕತರು-ಮುಖಂಡರ ನಡುವಿನ ಸಂಘರ್ಷ ಕೇವಲ ಹಾಸನಕ್ಕೆ  ಸೀಮಿತವಾಗಿಲ್ಲ. ಮಂಡ್ಯ,ರಾಮನಗರ, ತುಮಕೂರು,ಕೋಲಾರ, ಚಿಕ್ಕಬಳ್ಳಾಪುರ,ಮೈಸೂರು ಜಿಲ್ಲೆಗಳಲ್ಲೂ  ಕಾಂಗ್ರೆಸ್‌ ನಾಯಕರಿಗೆ ಬೆಲೆ ಕೊಡುವುದಿಲ್ಲ ಎಂಬ ದೂರುಗಳು ಕೆಪಿಸಿಸಿ ತಲುಪಿವೆ.

Advertisement

Udayavani is now on Telegram. Click here to join our channel and stay updated with the latest news.

Next