Advertisement

Bhavapoorna movie review; ಭಾವಚಿತ್ರದ ಹಿಂದೊಂದು ಭಾವನಾತ್ಮಕ ಚಿತ್ರಣ

12:05 PM Nov 04, 2023 | Team Udayavani |

ಅದೊಂದು ಮಲೆನಾಡಿನ ತಪ್ಪಲಿನಲ್ಲಿರುವ ತೊಂಭತ್ತರ ದಶಕದ ಪುಟ್ಟ ಊರು. ಪ್ರಕೃತಿ ಸೌಂದರ್ಯವನ್ನು ಹಾಸು ಹೊದ್ದಿರುವ ಈ ಊರಿನ ಜನರಿಗೂ ಫೋಟೋಗೂ, ಬಿಟ್ಟೆನೆಂದರೂ ಬಿಡದಂಥ ನಂಟು. ಸತ್ತಮೇಲಾದರೂ ತಮ್ಮ ಮನೆಯವರು ಬಂಧು-ಬಳಗದವರು ತಮ್ಮನ್ನು ನೆನಪಿಸಿಕೊಳ್ಳಲಿಕ್ಕಾದರೂ, ತಮ್ಮದೊಂದು ಫೋಟೋ ಇರಲೇಬೇಕು. ಜೀವನದಲ್ಲಿ ಏನೂ ಮಾಡದೇ ಇದ್ದರೂ ಪರವಾಗಿಲ್ಲ, ಒಂದು ಫೋಟೋ ಮಾತ್ರ ತೆಗೆಸಿಟ್ಟುಕೊಳ್ಳಬೇಕು ಎಂಬ ಮನಸ್ಥಿತಿ ಅಲ್ಲಿನ ಜನರದ್ದು. ಇಂಥ ಊರಿನಲ್ಲಿ ತನ್ನದೇ ಆದ ಕೆಲಸ ಮಾಡಿಕೊಂಡು ಅಂತರ್ಮುಖೀಯಾಗಿರುವ 60ರ ಆಸುಪಾಸಿನ ವ್ಯಕ್ತಿಯೊಬ್ಬನಿಗೆ ತನಗೂ ಒಂದು ಫೋಟೋ ಬೇಕು ಎಂಬ ಆಸೆ ಚಿಗುರೊಡೆಯುತ್ತದೆ. ಇಂಥ ಚಿಕ್ಕ ಆಸೆಯೊಂದನ್ನು ಈಡೇರಿಸಿಕೊಳ್ಳಲು ಹೊರಟಾಗ ಏನೇನು ಪರಿಪಾಟಲುಗಳನ್ನು ಆತ ಎದುರಿಸಬೇಕಾಗುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ಭಾವಪೂರ್ಣ’ ಸಿನಿಮಾದ ಕಥಾಹಂದರ.

Advertisement

ತೊಂಭತ್ತರ ಕಾಲಘಟ್ಟದ ಹಳ್ಳಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು, ಅದರಲ್ಲಿ ಎಮೋಶನ್‌, ಲವ್‌, ಕಾಮಿಡಿ, ಹಾಡು, ಡ್ಯಾನ್ಸ್‌ ಹೀಗೆ ಒಂದಷ್ಟು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಸೇರಿಸಿ ನಿರ್ದೇಶಕ ಚೇತನ್‌ ಮುಂಡಾಡಿ ಭಾವನಾತ್ಮಕವಾಗಿ “ಭಾವಪೂರ್ಣ’ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಇನ್ನು “ಭಾವಪೂರ್ಣ’ ಸಿನಿಮಾವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದು ನಟ ರಮೇಶ್‌ ಪಂಡಿತ್‌ ಅಭಿನಯ. ಇಳಿವಯಸ್ಸಿನಲ್ಲಿ ಯಾರೊಂದಿಗೂ ಹಂಚಿಕೊಳ್ಳಲಾಗದ ಚಿಕ್ಕ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳುವ ಪಾತ್ರದಲ್ಲಿ ರಮೇಶ್‌ ಪಂಡಿತ್‌ ಅಭಿನಯ ನೋಡುಗರ ಮನಮುಟ್ಟುತ್ತದೆ. ಉಳಿದಂತೆ ಮಂಜುನಾಥ್‌ ಹೆಗಡೆ, ಶೈಲಶ್ರೀ, ಅಥರ್ವ ಪ್ರಕಾಶ್‌, ವಿನ್ಯಾ ತಮ್ಮ ಪಾತ್ರದಲ್ಲಿ ಲವಲವಿಕೆಯ ಅಭಿನಯ ನೀಡಿದ್ದಾರೆ. ಇನ್ನಿತರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

“ಭಾವಪೂರ್ಣ’ ಸಿನಿಮಾದ ಹಾಡುಗಳಿಗೆ ವಿ. ಮನೋಹರ್‌ ಸಂಗೀತ ಸಂಯೋಜಿಸಿದ್ದು, ಒಂದೆರಡು ಹಾಡುಗಳು ಥಿಯೇಟರ್‌ನ ಹೊರಗೂ ಗುನುಗುವಂತಿದೆ. ಪ್ರಸನ್ನ ಛಾಯಾಗ್ರಹಣ ಮಲೆನಾಡಿನ ಪ್ರಕೃತಿ ಸೊಬಗನ್ನು ತೆರೆಮೇಲೆ ಸುಂದರವಾಗಿ ಕಾಣುವಂತೆ ಮಾಡಿದೆ. ಕೀರ್ತಿ ಸಂಕಲನ, ಕಲರಿಂಗ್‌, ಹಿನ್ನೆಲೆ ಸಂಗೀತ ಹೀಗೆ ತಾಂತ್ರಿಕ ಕಾರ್ಯಗಳಲ್ಲಿ ಗುಣಮಟ್ಟ ಕಾಣುತ್ತಿದೆ. ಕೆಲವೊಂದು ಅಂಶಗಳನ್ನು ಬದಿಗಿಟ್ಟು ಹೇಳುವುದಾದರೆ, “ಭಾವಪೂರ್ಣ’ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಗಿಂತ ಹೊರತಾಗಿರುವ ಒಂದು ಸದಭಿರುಚಿಯ ಪ್ರಯತ್ನ ಎನ್ನಬಹುದು

Advertisement

Udayavani is now on Telegram. Click here to join our channel and stay updated with the latest news.

Next