ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ತಾಯಿ ಭವಾನಿ ರೇವಣ್ಣ ಸೋಮವಾರ ಭೇಟಿಯಾಗಿ ಮಾತನಾಡಿದರು.
ಮಗ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಭೇಟಿಯಾದ ತಾಯಿ ಸ್ವಲ್ಪ ಹೊತ್ತು ಮಗನೊಂದಿಗೆ ಮಾತನಾಡಿದರು. ಮಗ ಭಾವುಕನಾದಾಗ ತಾಯಿ ಸಂತೈಸಿದರು. ಬಳಿಕ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಬಂದಿದ್ದ ಭವಾನಿ ಮಾಧ್ಯಮಗಳನ್ನು ಕಂಡು ಮುಖ ಮುಚ್ಚಿಕೊಂಡರು. ಬಳಿಕ ಕಾರಿನಿಂದ ಇಳಿದು ಸ್ಟಿಕ್ ಸಹಾಯದಿಂದ ನಡೆದುಕೊಂಡು ಜೈಲಿನತ್ತ ತೆರಳಿದರು. ಮಗನ ಭೇಟಿ ಬಳಿಕವೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟರು. ಪ್ರಜ್ವಲ್ ವಿರುದ್ಧ 3 ಅತ್ಯಾಚಾರ ಮತ್ತು ಬಲವಂತವಾಗಿ ಸಂತ್ರಸ್ತೆಯರ ಅಶ್ಲೀಲ ವೀಡಿಯೋ ಸೆರೆ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಸದ್ಯ ನ್ಯಾಯಾಲಯ ಪ್ರಜ್ವಲ್‌ನನ್ನು ಜು. 8ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸೂರಜ್ 2 ದಿನ ಸಿಐಡಿ ವಶಕ್ಕೆ
ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸೂರಜ್ ರೇವಣ್ಣನನ್ನು ಸಿಐಡಿ ಅಧಿಕಾರಿಗಳು ಮತ್ತೂಮ್ಮೆ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
7 ದಿನಗಳ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸೋಮವಾರ ಆರೋಪಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೆಲವೊಂದು ಪರೀಕ್ಷೆ, ಧ್ವನಿ ಮಾದರಿ ಸಂಗ್ರಹ ಮತ್ತು ಹೆಚ್ಚಿನ ವಿಚಾರಣೆ ನಡೆಸಬೇಕಾಗಿರುವುದರಿಂದ ಆರೋಪಿಯನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಜತೆಗೆ ಪ್ರಕರಣದ ತನಿಖಾ ಪ್ರಗತಿಯ ಮಾಹಿತಿಯನ್ನು ಕೋರ್ಟ್‌ಗೆ ನೀಡಿದರು. ಬಳಿಕ ಕೋರ್ಟ್ ಆರೋಪಿಯನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು.