ಹಾಸನ: ಜನತಾ ಜಲಧಾರೆ ಯಾತ್ರೆಯೊಂದಿಗೆ ಜೆಡಿಎಸ್ ತನ್ನ ಭದ್ರಕೋಟೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಕೊರತೆಯಿಲ್ಲ. ಆದರೆ ಇಬ್ಬರು ಹಿರಿಯ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಮತ್ತು ಎ. ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಬೆಳವಣಿಗೆಯಿಂದ ಅರಸೀಕೆರೆ ಮತ್ತು ಅರಕಲಗೂಡು ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಜೆಡಿಎಸ್‌ಗೆ ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದಲೂ ಬಿಗಿ ಹಿಡಿತ ಸಾಧಿಸಿರುವ ಜೆಡಿಎಸ್ ಜಿಲ್ಲಾ ಕೇಂದ್ರವಾಗಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿತ್ತು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಶಾಸಕರನ್ನು ಮಣಿಸುವ ಸವಾಲು ಎದುರಿಸುತ್ತಿರುವ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಾಗಿದೆ.
ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಪುತ್ರ ಎಚ್.ಪಿ.ಸ್ವರೂಪ್, ಬಿಜೆಪಿ ತೊರೆದು ಬಂದಿರುವ ಅಗಿಲೆ ಯೋಗೀಶ್, ಹಾಸನ ಜಿ.ಪಂ. ಮಾಜಿ ಉಪಾಧ್ಯಕ್ಷ ಎಸ್.ದ್ಯಾವೇಗೌಡ, ಬೆಂಗಳೂರಿನಿಂದ ವಲಸೆ ಬಂದಿರುವ ಪ್ರಸಾದ್‌ಗೌಡ ಜೆಡಿಎಸ್‌ನ ಸ್ಪರ್ಧಾಂಕ್ಷಿಗಳು. ಆದರೆ ಈ ನಾಲ್ವರೂ ಹಾಲಿ ಬಿಜೆಪಿ ಶಾಸಕ ಪ್ರೀತಂಗೌಡರನ್ನು ಮಣಿಸಲು ಸಮರ್ಥರಲ್ಲ.
ಎಚ್.ಡಿ.ರೇವಣ್ಣ ಅಥವಾ ಭವಾನಿ ರೇವಣ್ಣ ಅವರು ಅಭ್ಯರ್ಥಿಗಳಾದರೆ ಮಾತ್ರ ಪ್ರೀತಂ ಗೌಡರನ್ನು ಎದುರಿಸಲು ಸಾಧ್ಯ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ. ಹಾಗಾಗಿ ರೇವಣ್ಣ ಕುಟುಂಬದವರ ಆಗಮನದ ನಿರೀಕ್ಷೆಯಲ್ಲಿ ಜೆಡಿಎಸ್ ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್‌ನಲ್ಲಿ ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ ನಡುವೆ ಟಿಕೆಟ್‌ಗಾಗಿ ಸ್ಪರ್ಧೆ ಏರ್ಪಟ್ಟಿದೆ. 2 ಬಾರಿ ಸೋತಿರುವ ಎಚ್.ಕೆ.ಮಹೇಶ್ 3ನೇ ಬಾರಿಯ ಸ್ಪರ್ಧೆಗೂ ಪ್ರಯತ್ನ ಮುಂದುವರಿಸಿದ್ದಾರೆ. ಬಿಜೆಪಿಯಲ್ಲಿ ಶಾಸಕ ಪ್ರೀತಂಗೌಡ ಬಿಟ್ಟರೆ ಮತ್ತೊಬ್ಬ ಆಕಾಂಕ್ಷಿ ಇಲ್ಲವೇ ಇಲ್ಲ.
ಹೊಳೆನರಸೀಪುರ ಕ್ಷೇತ್ರದಲ್ಲಿ ಎಚ್.ಡಿ. ರೇವಣ್ಣ ಕುಟುಂಬದ ಬದ್ಧ ರಾಜಕೀಯ ವೈರಿ ಮಾಜಿ ಸಚಿವ ದಿ| ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಾಂಕ್ಷಿಗಳೇ ಕಾಣುತ್ತಿಲ್ಲ. ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಸೇರಲು ಮಾಜಿ ಸಚಿವ ಎ.ಮಂಜು, ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎ.ಟಿ.ರಾಮ ಸ್ವಾಮಿ ಪಕ್ಷ ಬಿಟ್ಟರೆ ಜೆಡಿಎಸ್ ಪ್ರಬಲ ಅಭ್ಯರ್ಥಿಗೆ ಹುಡುಕಾಡಬೇಕಾಗಿದೆ. ರಾಮಸ್ವಾಮಿ ಅವರ ಬೆಂಬಲಿಗ ಕೃಷ್ಣೇಗೌಡ ಈಗಾಗಲೇ ಕಾಂಗ್ರೆಸ್ ಸೇರಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಯೋಗಾ ರಮೇಶ್ ಬಿಜೆಪಿ ಅಭ್ಯರ್ಥಿಯಾಗಲು ಸಜ್ಜಾಗಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಹ್ಯಾಟ್ರಿಕ್ ಗೆಲುವಿಗೆ ರಂಗ ತಾಲೀಮು ನಡೆಸಿದ್ದಾರೆ. ಕಾಂಗ್ರೆಸ್‌ನ ಎಂ. ಎ.ಗೋಪಾಲಸ್ವಾಮಿ ಅವರು ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ. ಬಿಜೆಪಿಯಿಂದ ಅಣತಿ ಶೇಖರ್ ಹೆಸರು ಕೇಳಿ ಬರುತ್ತಿದೆ.
ಅರಸೀಕೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿರುವ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರು ಪಕ್ಷ ಬಿಟ್ಟರೆ ಜೆಡಿಎಸ್ ಹೊಸಬರನ್ನು ಹುಡುಕಬೇಕಾಗಿದೆ. ಕಾಂಗ್ರೆಸ್ ಮುಖಂಡ ಶಶಿಕುಮಾರ್ ಅವರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಬಿಜೆಪಿಯಿಂದ ಎನ್.ಆರ್.ಸಂತೋಷ್ ಈಗಾಗಲೇ ಚುನಾವಣೆ ಸಿದ್ಧತೆ ನಡೆಸಿದ್ದಾರೆ.
ಎಚ್.ಕೆ.ಕುಮಾರಸ್ವಾಮಿಗೆ ಬಿಜೆಪಿ ಸವಾಲು
ಸಕಲೇಶಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿರುವ ಎಚ್.ಕೆ.ಕುಮಾರಸ್ವಾಮಿ ಅವರೆದುರು ಬಿಜೆಪಿಯ ನಾರ್ವೆ ಸೋಮಶೇಖರ್ ಮತ್ತೂಮ್ಮೆ ಎದುರಾಳಿಯಾಗಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ ನಿವೃತ್ತ ಐಎಎಸ್ ಅಧಿಕಾರಿ ಸಿದ್ಧಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರೂ ಪ್ರಯತ್ನ ನಡೆಸಿದ್ದಾರೆ. ಬೇಲೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಲಿಂಗೇಶ್ ಅವರ ಎದುರಾಳಿಗಳಾಗಿ ಮಾಜಿ ಸಚಿವ ಕಾಂಗ್ರೆಸ್‌ನ ಬಿ.ಶಿವರಾಮು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಕೆ.ಸುರೇಶ್ ಸ್ಪರ್ಧಾ ಕಣಕ್ಕಿಳಿಯುವುದು ಖಚಿತವಾಗಿದೆ. ಮಾಜಿ ಶಾಸಕ ದಿ| ರುದ್ರೇಶಗೌಡ ಸಹೋದರ ಕೃಷ್ಣೇಗೌಡ ಅವರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
-ಎನ್.ನಂಜುಂಡೇಗೌಡ