ಬೆಂಗಳೂರು: ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಹುಡುಕಾಡುತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ವಿರುದ್ಧ ನ್ಯಾಯಾಲಯವು ಬಂಧನ ವಾರಂಟ್ ಜಾರಿ ಮಾಡಿದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಭವಾನಿಗೆ ಎಸ್‌ಐಟಿ ಎರಡು ಬಾರಿ ನೋಟಿಸ್ ನೀಡಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭವಾನಿ ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಅವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಎಸ್‌ಐಟಿಯ ಒಂದು ತಂಡ ಎಲ್ಲೆಡೆ ತಲಾಶ್ ನಡೆಸುತ್ತಿದೆ.
ನೋಟಿಸ್‌ಗೆ ಕ್ಯಾರೇ ಎನ್ನದ ಭವಾನಿ
ಎಸ್‌ಐಟಿಯು ಭವಾನಿ ರೇವಣ್ಣಗೆ ಎರಡು ಬಾರಿ ನೀಡಿದ್ದ ನೋಟಿಸ್‌ಗೂ ಕ್ಯಾರೇ ಎನ್ನದೇ ವಿಚಾರಣೆಗೆ ಹಾಜರಾಗಿರಲಿಲ್ಲ. ತನಿಖೆಗೆ ಬೇಕಿದ್ದರೆ ಹೊಳೆನರಸೀಪುರದ ಮನೆಗೆ ಬನ್ನಿ ಎಂದು ಉತ್ತರಿಸಿದ್ದರು. ಅದರಂತೆ ಎಸ್‌ಐಟಿ ತಂಡವು ಇತ್ತೀಚೆಗೆ ತೆರಳಿದಾಗ ಪರಾರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದರು. ಎಸ್‌ಐಟಿ ಅಧಿಕಾರಿಗಳು 7 ಗಂಟೆ ಕಾದು ಮರಳಿದ್ದರು.