ರಾಯಬಾಗ: ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಕೃಷ್ಣಾ ನದಿ ನೀರಿನ ಮಟ್ಟ ಸಂಪೂರ್ಣ ತಳ ಮುಟ್ಟಿದ್ದು, ಗ್ರಾಮದಲ್ಲಿ ಜನ-ಜಾನುವಾರುಗಳು ನೀರಿಗಾಗಿ ಸಂಕಷ್ಟ ಪಡುವ ಪರಿಸ್ಥಿತಿ ಉದ್ಭವಿಸಿದೆ. ಗ್ರಾಮದಲ್ಲಿ 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ದಿನನಿತ್ಯ ಕನಿಷ್ಠ 1 ಲಕ್ಷಕ್ಕೂ ಅಧಿಕ ಲೀಟರ್‌ಗಳಷ್ಟು ನೀರಿನ ಅವಶ್ಯಕತೆ ಇದೆ. ಗ್ರಾಮಕ್ಕೆ ನೀರನ್ನು ಜಾಕ್‌ವೆಲ್ ಮೂಲಕ ನೀರನ್ನು ಒದಗಿಸಲಾಗುತ್ತಿತ್ತು. ಆದರೆ ನದಿಯಲ್ಲಿ ನೀರಿನ ಅಭಾವ ಉಂಟಾಗಿ ಜಾಕ್‌ವೆಲ್ ನೀರನ್ನು ಪೂರೈಸಲು ಸಾಧ್ಯವಾಗದೇ ಇರುವುದರಿಂದ ಗ್ರಾಮಸ್ಥರಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಅಂತರ್ಜಲಮಟ್ಟವೂ ಕುಸಿದಿದ್ದರಿಂದ ಕೊಳವೆ ಬಾವಿಗಳೂ ಉಪಯೋಗಕ್ಕೆ ಬರುತ್ತಿಲ್ಲ. ಶುದ್ಧ ನೀರಿನ ಘಟಕಗಳಲ್ಲೂ ನೀರಿನ ಅಭಾವ ಅಭಾವವಾಗಿ ಶುದ್ಧ ನೀರು ಮರಿಚಿಕೆಯಾಗುತ್ತಿದೆ.
ಬೆಳೆಗಳಿಗೆ, ಜಾನುವಾರುಗಳಿಗೂ ನೀರಿನ ಕೊರತೆ ಬಾಧಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬಾರದಂತಾಗುತ್ತದೆ. ನದಿ ತೀರದ ಜನರು ಕೃಷ್ಣಾ ನದಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ನದಿಯಲ್ಲಿ ನೀರಿದ್ದರೆ ನದಿ ತೀರದ ಕೊಳವೆ ಬಾವಿ ಮತ್ತು ತೆರೆದ ಬಾವಿಗಳ ಅಂರ್ಜಲಮಟ್ಟ ಕೂಡ ಸುಸ್ಥಿರದಲ್ಲಿದ್ದು, ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಹಾರಾಷ್ಟ್ರದಿಂದ ನೀರು ತರುವುದೇ ಆಗಿದೆ.
ನೀರಿನ ಸಮಸ್ಯೆ ಪರಿಹರಿಸಲು ಕೂಡಲೇ ಮಹಾರಾಷ್ಟ್ರದ ಕೊಯ್ನಾ ಅಥವಾ ಕಾಳಮ್ಮವಾಡಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಬಾವನ ಸೌಂದತ್ತಿ ಗ್ರಾಪಂ ಅಧ್ಯಕ್ಷ ಅಜಿತ ಖೆಮಲಾಪೂರೆ, ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದರಿಂದ ಗ್ರಾಮದ ಜನ-ಜಾನುವಾರುಗಳಿಗೆ ತೊಂದರೆ ಆಗಿದೆ. ಗ್ರಾಮದಲ್ಲಿ 20 ಕೊಳವೆಬಾವಿ ಹಾಗೂ 30 ಜಲಕುಂಭಗಳು ಮತ್ತು ಶುದ್ಧ ನೀರಿನ ಘಟಕಗಳಿದ್ದು, ಅವುಗಳ ಮೂಲಕ ತಾತ್ಕಾಲಿಕವಾಗಿ ನೀರಿನ ಅಭಾವ ಉಂಟಾಗದಂತೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಜಲಕುಂಭಗಳಿಂದ ನೇರವಾಗಿ ಯಾರು ಕೂಡ ಪೈಪ್ ಗಳನ್ನು ಹಾಕಿಕೊಳ್ಳಬಾರದು. ಇದರಿಂದ ಸಾರ್ವಜನಿಕರಿಗೆ ನೀರಿನ ತೊಂದರೆ ಆಗುತ್ತದೆಂದು ತಿಳಿಸಿದ್ದಾರೆ.