ನಟಿಯರು ಮದುವೆಯಾದ ನಂತರ ಕೇಳಲಾಗುವ ಮೊದಲ ಪ್ರಶ್ನೆ ಎಂದರೆ, “ಮುಂದೆ ನೀವು ನಟಿಸುತ್ತೀರಾ’ ಎಂಬುದು. ಅನೇಕ ನಟಿಯರಿಗೆ ಈ ಪ್ರಶ್ನೆ ಕಿರಿಕಿರಿಯುಂಟು ಮಾಡೋದು ಸುಳ್ಳಲ್ಲ. ಆದರೆ, ಮೊನ್ನೆ ಮೊನ್ನೆಯಷ್ಟೇ ಹಸೆಮಣೆ ಏರಿದ ಭಾವನಾಗೆ ಆ ಪ್ರಶ್ನೆ ಎದುರಾಗುಷ್ಟರಲ್ಲಿ ಅವರೇ ಉತ್ತರಿಸಿದ್ದಾರೆ. ಅದು ಹೊಸ ಸಿನಿಮಾವೊಂದನ್ನು ಒಪ್ಪಿಕೊಳ್ಳುವ ಮೂಲಕ.
ಹೌದು, ನಟಿ ಭಾವನಾ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಪ್ರಜ್ವಲ್ ದೇವರಾಜ್ ನಾಯಕರಾಗಿರುವ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ. ಕೆಲ ದಿನಗಳ ಹಿಂದಷ್ಟೇ ಪ್ರಜ್ವಲ್ “ಇನ್ಸ್‌ಪೆಕ್ಟರ್ ವಿಕ್ರಂ’ ಎಂಬ ಸಿನಿಮಾ ಮಾಡುತ್ತಿರುವ ವಿಷಯವನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರದಲ್ಲಿ ಭಾವನಾ ನಾಯಕಿಯಾಗಿರುವ ಸುದ್ದಿ ಬಂದಿದೆ.
ಸಾಮಾನ್ಯವಾಗಿ ನಟಿಯರು ಮದುವೆಯಾಗಿ ಒಂದು ವರ್ಷದವರೆಗೆ ಅವರ ಹೊಸ ಸಿನಿಮಾದ ಸುದ್ದಿಗಳು ಬರೋದು ಕಡಿಮೆ. ಆದರೆ, ಭಾವನಾ ಮದುವೆಯಾಗಿ ಒಂದು ವಾರ ಆಗುವಷ್ಟರಲ್ಲೇ ಅವರ ಹೊಸ ಸಿನಿಮಾದ ಸುದ್ದಿ ಹೊರಬಿದ್ದಿದೆ. ಪ್ರಜ್ವಲ್ ಅವರ 30ನೇ ಚಿತ್ರ ಇದಾಗಿದ್ದು, “ಪುಷ್ಪಕ ವಿಮಾನ’ ನಿರ್ಮಿಸಿದ್ದ ವಿಖ್ಯಾತ್ ನಿರ್ಮಾಣ ಮಾಡುತ್ತಿದ್ದಾರೆ. ನರಸಿಂಹ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಅವರಿಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತುಂಬಾ ಸ್ಟೈಲಿಶ್ ಪಾತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಕ್ಲಾಸ್ ಜೊತೆಗೆ ಮಾಸ್ ಅಂಶಗಳೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರಂತೆ. ಇನ್ನು, ಚಿತ್ರದಲ್ಲಿ ಭಾವನಾ ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ನಮ್ಮ ಚಿತ್ರದ ನಾಯಕಿಯ ಪಾತ್ರಕ್ಕೆ ಬ್ಯೂಟಿ ಹಾಗೂ ಪರ್‌ಫಾರ್ಮೆನ್ಸ್‌ನ ನಟಿ ಬೇಕಿತ್ತು.
ಹಾಗಾಗಿ, ಭಾವನಾ ಅವರನ್ನು ಕೇಳಿದೆವು. ಕಥೆ ಹಾಗೂ ಅವರ ಪಾತ್ರ ಕೇಳಿ ಒಪ್ಪಿಕೊಂಡರು’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ವಿಖ್ಯಾತ್. ಹೇಳುತ್ತಾರೆ ನಿರ್ಮಾಪಕ ವಿಖ್ಯಾತ್. ಸೋಮವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಫೆಬ್ರವರಿ 7 ರಿಂದ ಭಾವನಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.