ಕಂಪ್ಲಿ: ಪಟ್ಟಣದ ವ್ಯಾಪಾರಸ್ಥ ಜೈನ ಮನೆತನದಲ್ಲಿ ಜನಿಸಿ ಪದವಿ ಶಿಕ್ಷಣ ಪಡೆದು ನಿನ್ನೆಯವರೆಗೂ ಭಾವನಾ ಚೋಪ್ರಾ ಎಂದು ಗುರುತಿಸಲ್ಪಡುತ್ತಿದ್ದ ಜೈನ ಯುವತಿ ಸೋಮವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದಳು.
ಜೈನ ಗುರುಗಳಾದ ಉಪ ಪ್ರವರ್ತ ಉರ್ಜುಪುಂಜ ವೈರಾಗ್ಯರತ್ನ ಸಾಗರ್‌ಜೀ ಹಾಗೂ ತಪೋನಿಷ್ಠ ಪಾರ್ಶ್ವರತ್ನ ಸಾಗರ್‌ಜೀ ಅವರು ಸನ್ಯಾಸ ದೀಕ್ಷೆ ನೀಡಿದರು.
ಇದಕ್ಕೂ ಮುನ್ನಾ ಬೆಳಗ್ಗೆಯಿಂದ ಸನ್ಯಾಸ ಸ್ವೀಕಾರ ಕಾರ್ಯಕ್ರಮಗಳು ಜರುಗಿದವು. ನಂತರ ಧಾರ್ಮಿಕ ಪ್ರವಚನ ಹಾಗೂ ಭಕ್ತಿಗೀತೆಗಳ ಗಾಯನ ಜರುಗಿತು. ನಂತರ ಜೈನ ಗುರುಗಳು ಯುವತಿಗೆ ಸನ್ಯಾಸ ದೀಕ್ಷೆ ನೀಡಿ ಪ್ರಿಯ್ ಕೃಪಾಂಜನಶ್ರೀಜಿ ಎಂದು ಪುನರ್ ನಾಮಕರಣ ಮಾಡಿದರು.
ಸನ್ಯಾಸ ಸ್ವೀಕರಿಸಿದ ಪ್ರಿಯ್ ಕೃಪಾಂಜನಶ್ರೀಜಿ ಅವರು ಮುಂದಿನ ದಿನಗಳಲ್ಲಿ ದೀಕ್ಷೆ ನಂತರ ಪಾರ್ಶ್ವಮಣಿ ತೀರ್ಥಪ್ರೇರಿಕ್ ಗಜ್ ಗಣಿನಿ ಶ್ರೀ ಸುಲೋಚನಾ ಶ್ರೀಜಿ ಹಾಗೂ ಏವಂಸುಲಕ್ಷಣಾಶ್ರೀಜಿಗಳ ಪರಮ ಶಿಷ್ಯೆಯಾಗಿ ಸನ್ಯಾಸ ಜೀವನ ಸವೆಸುವ, ಸಂಸ್ಕೃತ, ಪ್ರಾಕೃತ ಕಲಿಯುತ್ತಿದ್ದು, ಜೈನಧರ್ಮದ ಮೂಲ ಗ್ರಂಥಗಳನ್ನು ಅಧ್ಯಯನ ಮಾಡುವ, ಬೋಧಿಸುವ ಆಶಯ ಹೊಂದಿದ್ದಾರೆ.
ಮಂಗಳವಾರ ತನ್ನ ಪೂರ್ವಾಶ್ರಮದ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ ತನ್ನ ಸನ್ಯಾಸ ಜೀವನ ಸಾಗಿಸುತ್ತಾಳೆ. ಇವರ ಪ್ರಥಮ ಚಾರ್ತುಮಾಸ್ಯ ಜುಲೈ ತಿಂಗಳಲ್ಲಿ ಆರಂಭವಾಗಲಿದೆ.
ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಸನ್ಯಾಸಿಯ ಪೂರ್ವಾಶ್ರಮದ ತಂದೆ ಮಹೇಂದ್ರಕುಮಾರ್, ತಾಯಿ ವಸಂತಾದೇವಿ, ಸಹೋದರರು, ಪಟ್ಟಣ ಸೇರಿದಂತೆ ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಜೈನ ಸಮಾಜದ ಬಂಧುಗಳು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.