ನಿರ್ದೇಶಕ ಯೋಗರಾಜ್ ಭಟ್ ಸಾಮಾನ್ಯವಾಗಿ ಸೆಟ್ ಮೊರೆ ಹೋಗುವುದಿಲ್ಲ. ಒಂದು ವೇಳೆ ಅವರ ಸಿನಿಮಾಗಳಲ್ಲಿ ಸೆಟ್ ಇದ್ದರೂ ಅದು ಹಾಡುಗಳಲ್ಲಿ. ಆದರೆ, ಈ ಬಾರಿ ತಮ್ಮ ಹೊಸ ಚಿತ್ರಕ್ಕೆ ಸೆಟ್ ಮೊರೆ ಹೋಗಿದ್ದಾರೆ ಭಟ್ರು. ಹೌದು, ಯೋಗರಾಜ ಭಟ್ರು “ಪಂಚತಂತ್ರ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಆ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆಯುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕಾಗಿ ವಿಶೇಷವಾದ ಸೆಟ್ ಹಾಕಲಾಗಿದೆ.
ಸುಮಾರು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಎರಡು ಸೆಟ್ ಹಾಕಿದ್ದು, ಅದರಲ್ಲಿ ಗ್ಯಾರೇಜ್ ಹಾಗೂ ಕಾಲೋನಿ ಸೆಟ್‌ಗಳಿವೆ. ಮುಖ್ಯವಾಗಿ ಗ್ಯಾರೇಜ್ ಸೆಟ್ ಗಮನ ಸೆಳೆಯುತ್ತಿದ್ದು, ಸಖತ್ ಸ್ಟೈಲಿಶ್ ಆಗಿ ನಿರ್ಮಿಸಲಾಗಿದೆ. ಹೊಸ್ಮನೆ ಮೂರ್ತಿಯವರ ಕಲಾ ನಿರ್ದೇಶನದಲ್ಲಿ ಈ ಸೆಟ್‌ಗಳು ಸಿದ್ಧವಾಗಿವೆ. ಸಾðಪ್‌ಗ್ಳನ್ನು ಬಳಸಿಕೊಂಡು ವಿಶೇಷವಾದ ವಿನ್ಯಾಸಗಳನ್ನು ಕೂಡಾ ಮಾಡಲಾಗಿದೆ. ಜೊತೆಗೆ ಸೆಟ್ ಮುಂದೆ ನಿಮಗೆ ರೇಸ್ ಕಾರುಗಳು ಕೂಡಾ ಕಾಣಸಿಗುತ್ತದೆ.
ಅಷ್ಟಕ್ಕೂ ಗ್ಯಾರೇಜ್ ಎದುರು ಕಾಲೋನಿ ಸೆಟ್ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಯಂಗ್ ವರ್ಸಸ್ ಓಲ್ಡ್. ಹೌದು, ಭಟ್ರು ಜನರೇಶನ್ ಗ್ಯಾಪ್ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದು, ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಯಾವ ತರಹದ ಗ್ಯಾಪ್ ಇದೆ ಮತ್ತು ಮನಸ್ಥಿತಿಗಳು ಹೇಗೆ ಬದಲಾಗಿವೆ ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಕಾಮಿಡಿ ಹಿನ್ನೆಲೆಯಲ್ಲಿ ಭಟ್ರು ಫಿಲಾಸಫಿ ಹೇಳಲು ಹೊರಟಿದ್ದಾರೆಂದರೆ ತಪ್ಪಲ್ಲ.
ಚಿತ್ರದಲ್ಲಿ ಸಾಕಷ್ಟು ಸೀರಿಯಸ್ ಹಾಗೂ ಜೀವನಕ್ಕೆ ಸಂಬಂಧಿಸಿದ ಅಂಶಗಳನ್ನು ಮಜಾವಾಗಿ ಹೇಳಲಿದ್ದಾರಂತೆ ಭಟ್ರು. ಅದೇ ಕಾರಣಕ್ಕೆ ಗ್ಯಾರೇಜ್ ಹಾಗೂ ಕಾಲೋನಿ ಸೆಟ್ ಹಾಕಿದ್ದಾರೆ. ಗ್ಯಾರೇಜ್ ಸೆಟ್ ಯುವಕರ ಸಂಕೇತವಾದರೆ, ಕಾಲೋನಿ ಹಿರಿಯರಿಗೆ. ಗ್ಯಾರೇಜ್ ನಾಯಕನ ಅಡ್ಡವಾದರೆ, ಅದರ ಎದುರಿಗಿರುವ ಕಾಲೋನಿಯಲ್ಲಿ ಹಿರಿಯ ಜೀವಗಳಿರುತ್ತವೆ. ರಂಗಾಯಣ ರಘು ಸೇರಿದಂತೆ ಇತರರು ನಟಿಸುತ್ತಿದ್ದಾರೆ.
ಇವರ ನಡುವೆ ನಡೆಯುವ ಜಿದ್ದಾಜಿದ್ದಿಯನ್ನು ಮಜಾವಾಗಿ ಹೇಳಲು ಹೊರಟಿದ್ದಾರೆ ಭಟ್ರು. ಚಿತ್ರದಲ್ಲಿ ನಾಯಕ ರೇಸ್ ಕಾರ್ ಡಿಸೈನ್ ಮಾಡುವ ಗ್ಯಾರೇಜ್ ಇಟ್ಟುಕೊಂಡಿರುತ್ತಾನೆ. ಅಲ್ಲೇ ಆತನ ಹಾಗೂ ಸ್ನೇಹಿತರ ಅಡ್ಡ. ಅಲ್ಲಿ ಸಾಕಷ್ಟು ಫನ್ನಿ ಸನ್ನಿವೇಶಗಳು ನಡೆಯಲಿವೆಯಂತೆ. ಚಿತ್ರವನ್ನು ಯೋಗರಾಜ್ ಮೂವೀಸ್‌ನಲ್ಲಿ ಹರಿಪ್ರಸಾದ್ ಮತ್ತು ಸನತ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸೋನಾಲ್ ಮೊಂತೆರೋ ಹಾಗೂ ಅಕ್ಷರಾ ನಾಯಕಿಯರು. ವಿಹಾನ್ ಗೌಡ ನಾಯಕ.