Advertisement

ಭಟ್ರಕೆರೆ: ಅಪಾಯಕಾರಿ ತಿರುವು

10:39 AM May 31, 2022 | Team Udayavani |

ಬಜಪೆ: ಕಟೀಲು -ಬಜಪೆ ರಾಜ್ಯ ಹೆದ್ದಾರಿ 67ರಲ್ಲಿ ಪೆರ್ಮುದೆ ಭಟ್ರಕೆರೆಯಲ್ಲಿ ವಾಹನಗಳ ವೇಗ ಹಾಗೂ ಹೆದ್ದಾರಿಯಲ್ಲಿನ ಅಪಾಯಕಾರಿ ತಿರುವಿನಿಂದ ಹಲವಾರು ಅಪಘಾತಗಳಿಗೆ ಕಾರಣವಾಗಿದೆ.

Advertisement

ಕಟೀಲಿನಿಂದ ಬರುವ ವಾಹನಗಳು ಭಟ್ರಕೆರೆಯಲ್ಲಿ ರಾಜ್ಯ ಹೆದ್ದಾರಿ ನೇರವಿರುವ ಕಾರಣ ವೇಗದಿಂದ ಬರುತ್ತಿದ್ದು ಹಾಗೂ ಭಟ್ರಕೆರೆ ಬಸ್‌ ನಿಲ್ದಾಣ ಸಮೀಪದ ರಾಜ್ಯ ಹೆದ್ದಾರಿ ತಿರುವಿನಿಂದ ಕೂಡಿದ್ದು ವಾಹನಗಳು ಚಾಲಕನ ಹತೋಟಿಗೆ ಸಿಗದೇ ಅಪಘಾತಗಳು ಸಂಭವಿಸಲು ಕಾರಣವಾಗಿದೆ. ಬಜಪೆಯಿಂದ ಬರುವ ವಾಹನಗಳು ಕಾಣಿಸದೇ ಇರುವುದು ಅಪಘಾತಕ್ಕೆ ಇನ್ನೊಂದು ಕಾರಣ.

ಕತ್ತಲಸಾರ್‌, ಪಡೀಲ್‌, ನೆಲ್ಲಿತೀರ್ಥದಿಂದ ಬರುವ ಕೂಡು ರಸ್ತೆ

ಕತ್ತಲಸಾರ್‌, ಪಡೀಲ್‌, ನೆಲ್ಲಿತೀರ್ಥ ದಿಂದ ಬರುವ ರಸ್ತೆಗಳು ರಾಜ್ಯ ಹೆದ್ದಾರಿಗೆ ಕೂಡುತ್ತಿದೆ. ಇದರಿಂದಾಗಿ ಈ ರಸ್ತೆಯಿಂದ ಬಂದ ವಾಹನಗಳು ಬಜಪೆಗೆ ತೆರಳುವಾಗ ತೀರ ಬಲಕ್ಕೆ ತೆಗೆದುಕೊಂಡು ಹೋಗುತ್ತಿದೆ. ಇದರಿಂದ ಅಪಘಾತಕ್ಕೆ ಕಾರಣವಾಗಿದೆ.

ನಿಯಮ ಪಾಲನೆ ಮಾಡದ ವಾಹನಗಳು

Advertisement

ವಾಹನಗಳು ಸೂಚನೆ ನೀಡದೇ ಏಕಾಏಕೀ ಬಲಕ್ಕೆ, ಎಡಕ್ಕೆ ಸಂಚರಿ ಸುವ ಕಾರಣ ರಾಜ್ಯ ಹೆದ್ದಾರಿಯಲ್ಲಿ ಬರುವ ವಾಹನಗಳಿಗೆ ಸ್ಪಷ್ಟವಾಗಿ ತಿಳಿಯದ ಕಾರಣದಿಂದಲೂ ಅಪಘಾತಕ್ಕೆ ಕಾರಣವಾಗಿದೆ.

ಸಮೀಪದಲ್ಲಿಯೇ ಶಾಲೆ, ಮಸೀದಿ

ರಾಜ್ಯ ಹೆದ್ದಾರಿಯ ಭಟ್ರಕೆರೆಯಲ್ಲಿ ಉರ್ದು ಶಾಲೆ ಹಾಗೂ ಮಸೀದಿ ಇದೆ. ಇದರಿಂದ ಇಲ್ಲಿ ವಾಹನಗಳ ವೇಗಕ್ಕೆ ಮಿತಿ ಅಗತ್ಯ. ಬಸ್‌ ನಿಲ್ದಾಣಗಳು ಎರಡು ಕಡೆಗಳಲ್ಲಿವೆ. ರಸ್ತೆಯಲ್ಲಿಯೇ ಬಸ್‌ ಗಳನ್ನು ನಿಲ್ಲಿಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿದೆ.

ರಾಜ್ಯ ಹೆದ್ದಾರಿಯಲ್ಲಿ ತಿರುವಿನ ಬಗ್ಗೆ ಸೂಚಿಸುವ ಸೂಚನ ಫಲಕ ಹಾಕಬೇಕಾಗಿದೆ. ವಾಹನಗಳ ವೇಗ ತಡೆಗೆ ಬ್ಯಾರಿಕೇಡ್‌ಗಳನ್ನು ಹಾಕಬೇಕು. ವೇಗದ ಮಿತಿಗಳ ಬಗ್ಗೆಯೂ ಸೂಚನ ಫಲಕ ಹಾಕಬೇಕು ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಹಲವಾರು ಅಪಘಾತ

ಈ ಪ್ರದೇಶದಲ್ಲಿ ಒಂದು ವರ್ಷದೊಳಗೆ 2 ಸಾವು ಸಹಿತ ಹಲವಾರು ಅಪಘಾತಗಳು ಸಂಭವಿಸಿವೆ. ಹೆಚ್ಚಾಗಿ ಇಲ್ಲಿ ಬೈಕ್‌ಗಳ ನಡುವೆ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆ ಒಂದೆಡೆ ಬಜಪೆ ಪಟ್ಟಣ ಪಂಚಾಯತ್‌ ಇನ್ನೊಂದೆಡೆ ಪೆರ್ಮುದೆ ಗ್ರಾಮ ಪಂಚಾಯತ್‌ಗಳ ಗಡಿ ಪ್ರದೇಶಗಳು.

Advertisement

Udayavani is now on Telegram. Click here to join our channel and stay updated with the latest news.

Next