ಭಟ್ಕಳ : ಭಟ್ಕಳದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಿಂದೂ ಕಾಲೋನಿಯಲ್ಲಿ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ರಸ್ತೆಯ ಮೇಲೆಯೇ ಹಳ್ಳದಂತೆ ನೀರು ಹರಿದು ಹೋಗುತ್ತಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳು ಬಿದ್ದಿದ್ದು ರಸ್ತೆಯಿಂದಲೇ ನೀರು ರಭಸವಾಗಿ ಹರಿಯುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಜನರೂ ಕೂಡಾ ನಡೆದುಕೊಂಡು ಹೋಗುವುದಕ್ಕೂ ಭಯಪಡುವಂತಾಗಿದ್ದು ತಕ್ಷಣ ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಿ ರಸ್ತೆಯಲ್ಲಿ ನೀರು ಹರಿಯುವುದನ್ನು ಬಂದ್ ಮಾಡಬೇಕು ಎನ್ನವುದು ಈ ಭಾಗದ ನಾಗರೀಕರ ಆಗ್ರಹವಾಗಿದೆ.
2019 ರಲ್ಲಿ ಹೋಟೆಲ್ ಸಿಟಿ ಲೈಟ್ ಹಿಂಭಾಗದಲ್ಲಿ ಶಾಸಕರ ನಿಧಿಯಿಂದ ಹಣ ಮಂಜೂರು ಮಾಡಿದ್ದು 190 ಮೀಟರ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣವಾಗಿತ್ತು. ಅಲ್ಲಿಂದ ಮುಂದೆ ಇರುವ ಮಣ್ಣು ರಸ್ತೆಯು ಪ್ರಸ್ತುತ ಮಳೆಗಾಲದಲ್ಲಿ ಕಾಲುವೆಯಾಗಿ ಪರಿಣಮಿಸಿದ್ದು ಜನರಿಗೆ ಓಡಾಡುವುದಕ್ಕೆ ತೊಂದರೆಯಾಗಿದೆ ಎನ್ನುವುದು ನಾಗರೀಕರ ಆರೋಪವಾಗಿದೆ. ಜಾಲಿ ಪಟ್ಟಣ ಪಂಚಾಯತ್ ವತಿಯಿಂದ ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯ ಮಾಡಿಕೊಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಈ ಭಾಗದ ಕಾಂಕ್ರೀಟ್ ರಸ್ತೆಯನ್ನು ಇನ್ನೂ 200 ಮೀಟರ್‌ಗೆ ವಿಸ್ತರಿಸುವ ಅಗತ್ಯವಿದ್ದು ಸರಕಾರ ಈ ಕುರಿತು ಅಂದಾಜು ಪಟ್ಟಿಯನ್ನು ತಯಾರಿಸಿ ಮಂಜೂರಿ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಶುಕ್ರವಾರ ಮಳೆಯ ಅಬ್ಬರ ಜೋರಾಗಿದ್ದರೆ ಶನಿವಾರ ಬೆಳಿಗ್ಗೆಯಿಂದ ಸ್ವಲ್ಪ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತರ ಮತ್ತೆ ಬರಲು ಆರಂಭವಾಗಿದ್ದು ರಾತ್ರಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಬಿಜೆಪಿ-ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ ಜೆಡಿಎಸ್‌ಗೆ: ಎಚ್‌ಡಿಕೆ ವಿಶ್ವಾಸ
ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಯ ತನಕ ಕಳೆದ 24 ತಾಸುಗಳಲ್ಲಿ 83.8 ಮಿ.ಮಿ. ಮೀಟರ್ ಮಳೆಯಾಗಿದ್ದು ಇಲ್ಲಿಯ ತನಕ ಒಟ್ಟೂ 1350.6 ಮಿ.ಮಿ. ಮಳೆಯಾದಂತಾಗಿದೆ.
ಗುರುವಾರ 2 ಮನೆಗಳಿಗೆ ಹಾನಿಯಾಗಿದ್ದರೆ, ಶುಕ್ರವಾರ ಮಂಗಲ ಮಂಜುನಾಥ ನಾಯ್ಕ ಎನ್ನುವವರ ಮನೆ ಹಾನಿಯಾಗಿದೆ. ಶುಕ್ರವಾರ ರಾತ್ರಿ ಜಾಲಿಯಲ್ಲಿರುವ ಅಂಗನವಾಡಿ ಕೇಂದ್ರದ ಮೇಲೆ ತೆಂಗಿನ ಮರವೊಂದು ಬಿದ್ದು ಹಾನಿಯಾಗಿದ್ದು ಮಾವಳ್ಳಿಯ ದೀವಗೇರಿಯ ಲಾರೆನ್ಸ್ ಡಿಸೋಜ ಎನ್ನುವ ಮನೆಯ ಮೇಲೆಯೂ ತೆಂಗಿನ ಮರ ಬಿದ್ದು ಹಾನಿಯಾಗಿರುವ ಕುರಿತು ವರದಿಯಾಗಿದೆ.
ಕಳೆದ ಮರ‍್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಎಲ್ಲೆಲ್ಲೂ ನೀರು ಎನ್ನುವಂತಾಗಿದ್ದು, ನದಿ, ಹೊಳೆ, ಹಳ್ಳಗಳು ತುಂಬಿ ತುಳುಕುತ್ತಿವೆ. ಐ.ಆರ್.ಬಿ. ಅವರು ಮಾಡಿದ ಅವೈಜ್ಞಾನಿಕ ರಸ್ತೆಯಿಂದಾಗಿ ಶಿರಾಲಿ ಜನತಾ ವಿದ್ಯಾಲಯದ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನಿಂತು ವಾಹನ ಓಡಾಟಕ್ಕೆ ತೀವ್ರ ತೊಂದರೆಯಾಯಿತು.
ರಂಗೀಕಟ್ಟೆಯ ಹೆದ್ದಾರಿಯಲ್ಲಿಯೂ ಕೂಡಾ ನೀರು ತುಂಬಿ ಗಂಟೆಗಳ ಕಾಲ ವಾಹನ ಓಡಾಟಕ್ಕೆ ತೊಂದರೆಯಾದರೆ ಶನಿವಾರ ಮಳೆ ಸ್ವಲ್ಪ ಬಿಡುದು ಕೊಟ್ಟಿದ್ದರಿಂದ ಸುಗಮ ಸಂಚಾರ ಸಾಧ್ಯವಾಯಿತು. ವ್ಯಾಪಕ ಮಳೆ ಗಾಳಿಗೆ ಇಲ್ಲಿಯ ತನಕ ತಾಲೂಕಿನ ವಿವಿಧ ಕಡೆಗಳಲ್ಲಿ 10 ವಿದ್ಯುತ್ ಕಂಬಗಳು ಮತ್ತು 2 ಟ್ರಾನ್ಸಪಾರ್ಮರ್‌ಗೆ ಹಾನಿಯಾಗಿದ್ದು, ಒಟ್ಟೂ 1.80 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ ತಿಳಿಸಿದ್ದಾರೆ. ಮಳೆ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಗ್ರಾ.ಪಂ., ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಹಾನಿ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮಳೆ ಧಾರಕಾರವಾಗಿ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶದ ಗದ್ದೆಗಳಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಬೇಂಗ್ರೆಯ ಬಂಗಾರಮಕ್ಕಿಯಲ್ಲಿ ಹಳ್ಳ ತುಂಬಿ ಹರಿದ ಪರಿಣಾಮ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ನಾಟಿ ಮಾಡಿದ ಸಸಿಗಳು ಕೊಚ್ಚಿಕೊಂಡು ಹೋದ ಕುರಿತು ವರದಿಯಾಗಿದೆ. ಶಿರಾಲಿಯ ಸಾರದಹೊಳೆಯಲ್ಲೂ ಸಹ ವ್ಯಾಪಕ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು ಕೃಷ್ಣಾ ನಾಯ್ಕ ಮಾಲಿಕತ್ವದ ಪ್ರಥ್ವಿ ರೈಸ್ ಮಿಲ್ ಒಳಗೆ ನೀರು ನುಗ್ಗಿ ಅಕ್ಕಿ, ಭತ್ತ, ಹೊಟ್ಟು ಸೇರಿದಂತೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಕುರಿತು ವರದಿಯಾಗಿದೆ.