Advertisement

ಭಟ್ಕಳ: ಮೊಗೇರ ಸಮಾಜದ ಧರಣಿಗೆ ವಿಧಾನ ಪರಿಷತ್ ಸದಸ್ಯ ಸಾಥ್

11:28 PM Apr 03, 2022 | Team Udayavani |

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.

Advertisement

ಭಾನುವಾರ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿ ಧರಣಿಯಲ್ಲಿ ಕುಳಿತು ಮೊಗೇರ ಸಮಾಜದವರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ 12 ವರ್ಷಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಮೊಗೇರರು ಹೋರಾಟ ನಡೆಸುತ್ತಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರಕಾರ ಮತ್ತು ಬಿಜೆಪಿ ಪಕ್ಷ ಪ್ರಯತ್ನ ನಡೆಸಲಿದೆ. ಶೀಘ್ರದಲ್ಲಿ ಬೆಂಗಳೂರಿನಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ಕಾನೂನು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಸೇರಿದಂತೆ ಮೊಗೇರ ಸಮಾಜದ ಮುಖಂಡರನ್ನೂ ಸಭೆಗೆ ಆಹ್ವಾನಿಸಿ ಉನ್ನತ ಮಟ್ಟದ ಸಭೆ ಕರೆಯಲಿದ್ದು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೊಗೇರರ ಹಲವು ವರ್ಷಗಳ ಹೋರಾಟಕ್ಕೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸ ಇದೆ ಎಂದರು.

ಮೊಗೇರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಿಲ್ಲಾ ಮೀನು ಮಾರಾಟ ಫೆಡರೇಶನ್‍ನ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಮೊಗೇರರ ಕಡುಬಡತನದ ಜೀವನದ ಪರಿಸ್ಥಿತಿ ಕಂಡು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಪರಿಶಿಷ್ಟ ಪ್ರಮಾಣ ಪತ್ರ ಸಿಗುವಂತೆ ಮಾಡಿದ್ದರು. ಮೊಗೇರರು ಸಂಕಷ್ಟದ ಜೀವನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಬಟ್ಟೆಗೂ ಪರದಾಡುವ ಸ್ಥಿತಿ ಇತ್ತು. ಸರಕಾರ ಒಮ್ಮೆ ನೀಡಿದ ಜಾತಿ ಪ್ರಮಾಣ ಪತ್ರವನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಕಳೆದ 12 ವರ್ಷಗಳಿಂದ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯದೇ ಸರಕಾರದ ಸೌಲಭ್ಯ ಪಡೆಯಲು ಹಿನ್ನಡೆಯಾಗಿದೆ. ಸರಕಾರ ಇವರ ಹಲವು ವರ್ಷಗಳ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಉಪಸ್ಥಿತರಿದ್ದ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ ಮೊಗೇರರ ಜಾತಿ ಪ್ರಮಾಣ ಪತ್ರದ ಕುರಿತು ಶಾಸಕರು ವಿಧಾನ ಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಮೊಗೇರರಿಗೆ ನ್ಯಾಯ ಕೊಡಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. ನಮ್ಮ ಸರಕಾರದ ಅವಧಿಯಲ್ಲೇ ಮೊಗೇರರಿಗೆ ನ್ಯಾಯ ಸಿಗುತ್ತದೆಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ : ವೀರನಾಗಮ್ಮ ದೇವಾಲಯದ ಅಭಿವೃದ್ದಿಗೆ ಬದ್ಧ: ಶಾಸಕ ಡಾ.ಜಿ.ಪರಮೇಶ್ವರ್

Advertisement

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಹೋರಾಟ ಸಮಿತಿಯ ಅಧ್ಯಕ್ಷ ಎಫ್.ಕೆ. ಮೊಗೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಮಾಜಿ ಸೈನಿಕರ ಪ್ರಕೋಷ್ಟದ ಶ್ರೀಕಾಂತ ನಾಯ್ಕ, ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಕೆ. ಎಂ. ಕರ್ಕಿ, ಬಿಜೆಪಿ ಮಂಡಲ ಪ್ರಧಾನ ಕಾಯರ್ಯದರ್ಶಿಗಳಾದ ಮೋಹನ ನಾಯ್ಕ, ಭಾಸ್ಕರ ದೈಮನೆ, ಮೊಗೇರ ಸಮಾಜದ ಮುಖಂಡರಾದ ರಾಮ ಮೊಗೇರ, ದಿವಾಕರ ಮೊಗೇರ, ಭಾಸ್ಕರ ಮೊಗೇರ, ಪುಂಡಲೀಕ ಹೆಬಳೆ, ಕುಮಾರ ಹೆಬಳೆ, ವೆಂಕಟ್ರಮಣ ಮೊಗೇರ, ಯಾದವ ಮೊಗೇರ ಸೇರಿದಂತೆ ಹಲವು ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next