ಭಟ್ಕಳ: ಭಟ್ಕಳ ತಾಲೂಕು ಹಾಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯವರಿಂದ ನಿರಂತವಾಗಿ ದೌರ್ಜನ್ಯ, ಕಿರುಕುಳ ನಡೆದರೂ ಇದನ್ನು ತಡೆಯದೇ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಹಾಗೂ ಹೈಕೋರ್ಟ ವಕೀಲ ದತ್ತಾತ್ರೇಯ ಜೆ. ನಾಯ್ಕ ಆರೋಪಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಾಡವಳ್ಳಿಯ ಅರಣ್ಯ ಭೂಮಿ ಅತಿಕ್ರಮಣದಾರ ನಾರಾಯಣ ಮಂಜಪ್ಪ ನಾಯ್ಕ ಅವರ ಮೇಲೆ ಅರಣ್ಯ ಇಲಾಖೆಯವರು ಕಾನೂನು ಬಾಹಿರವಾಗಿ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ಧಾರವಾಡ ಪೀಠ ರದ್ದುಪಡಿಸಿದೆ.
ಅರಣ್ಯ ಇಲಾಖೆಯವರು ಅತಿಕ್ರಮಣದಾರರ ಮೇಲೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಅದನ್ನ ಬಿಟ್ಟು ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನು ಬಾಹಿರವಾಗಿದೆ. ಅರಣ್ಯ ಅತಿಕ್ರಮಣದಾರರು ತಾಲೂಕಿನಲ್ಲಿ ಇಲಾಖೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಸಹ ಜನಪ್ರತಿನಿಧಿಗಳು ಆ ಕುರಿತು ಯಾವುದೇ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು ಅರಣ್ಯ ಕಾಯ್ದೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ. ನಮ್ಮ ಜನಪ್ರತಿನಿಧಿಗಳ ಕಾನೂನಿನ ಅಜ್ಞಾನದಿಂದಲೇ ಅತಿಕ್ರಮಣದಾರರಿಗೆ ಇನ್ನೂ ಪಟ್ಟಾ ಸಿಗದಂತಾಗಿದೆ ಎಂದ ಅವರು ಈಗಿರುವ ಅರಣ್ಯ ಹಕ್ಕು ಕಾಯ್ದೆಯನ್ನು ಸರಳೀಕೃತಗೊಳಿಸಿದರೆ ಮಾತ್ರ ಅರಣ್ಯಭೂಮಿ ಅತಿಕ್ರಮಣದಾರರಿಗೆ ಸುಲಭವಾಗಿ ಪಟ್ಟಾ ಸಿಗಲಿದೆ ಎಂದರು.
ಇದನ್ನೂ ಓದಿ : ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ
ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾಯ್ದೆ ತಿದ್ದುಪಡಿ ತರಬೇಕು. ಅರಣ್ಯ ಭೂಮಿ ಅತಿಕ್ರಮಣದಾರರ ಕುರಿತು ಕೇಂದ್ರ, ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಭಾವನೆ ತಾಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಅತಿಕ್ರಮಣದಾರರು ತಮ್ಮ ಭೂಮಿ ಸಕ್ರಮವಾಗುತ್ತದೆಂಬ ನಂಬಿಕೆ ಹೊಂದಿ ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರ ಮೇಲೆ ಇಲಾಖೆಯವರಿಂದ ನಿರಂತರವಾಗಿ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ. ಸರಕಾರ ಕೂಡಲೇ ಅತಿಕ್ರಮಣದಾರರ ಮೇಲಿನ ದೌರ್ಜನ್ಯ ನಿಲ್ಲಿಸಲು ಇಲಾಖೆಗೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು. ಅತಿಕ್ರಮಣದಾರರ ಬಗ್ಗೆ ಇರುವ ನಿರ್ಲಕ್ಷ್ಯ ಭಾವನೆ ಬಿಟ್ಟು ಮಾನವೀಯ ನೆಲೆಯಲ್ಲಿ ಅತಿಕ್ರಮಣದಾರರಿಗೆ ಪಟ್ಟಾ ಕೊಡಿಸುವ ಕೆಲಸಕ್ಕೆ ಜನಪ್ರತಿನಿಧಿಗಳು ಇನ್ನಾದರೂ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಾಗರೀಕ ವೇದಿಕೆಯ ಪಾಸ್ಕಲ್ ಗೋಮ್ಸ, ಸಂದೀಪ ನಾಯ್ಕ, ಭಾಸ್ಕರ ಮುಂತಾದವರಿದ್ದರು.