Advertisement

ಭಟ್ಕಳ : ಈಡೇರದ ಮೊಗೇರ ಸಮಾಜದ ಬೇಡಿಕೆ : ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ

09:13 PM Jun 02, 2022 | Team Udayavani |

ಭಟ್ಕಳ : ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಕಳೆದ 72 ದಿನಗಳಿಂದ ಇಲ್ಲಿನ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಮೊಗೇರ ಸಮಾಜದವರು ಜೂ.3ರಿಂದ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿರುವುದಾಗಿ ಸಮಾಜದ ಹೊರಾಟ ಸಮಿತಿಯ ಪ್ರಮುಖರಲ್ಲಿ ಓರ್ವರಾದ ಎಫ್. ಕೆ. ಮೊಗೇರ ತಿಳಿಸಿದರು.

Advertisement

ಅವರು ಇಲ್ಲಿನ ಧರಣಿ ಸ್ಥಳದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.

ಪ್ರತಿಭಟನೆಯನ್ನು ತೀವ್ರಗೊಳಿಸುವ ಪ್ರಥಮ ಹಂತವಾಗಿ 1 ರಿಂದ 4ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ ಮನೆಯಲ್ಲಿಯೇ ಇರುವುದು. 5 ರಿಂದ ಪದವಿ ತನಕದ ವಿದ್ಯಾರ್ಥಿಗಳು ಬೆಳಿಗ್ಗೆ 10 ಗಂಟೆಗೆ ಶಂಶುದ್ಧೀನ್ ಸರ್ಕಲ್ ನಿಂದ ಮೆರವಣಿಗೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಅರ್ಧ ದಿನದ ಮುಷ್ಕರವನ್ನು ನಡೆಸಿ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದರು. ಮುಂದೆ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರೆಯುವ ತನಕವೂ ಕೂಡಾ ವಿದ್ಯಾರ್ಥಿಗಳು ಶಾಲಾ-ಕಾಲೇಜು ಬಹಿಷ್ಕಾರ ಮುಂದುವರಿಯುವುದು ಎಂದರು.

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಮುಂದುವರಿಸುವಂತೆ ಆಗ್ರಹಿಸಿ ಕಳೆದ 72 ದಿನಗಳಿಂದ ನಾವು ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಸರಕಾರ ನಮ್ಮ ಧರಣಿ ಸತ್ಯಾಗ್ರಹಕ್ಕೆ ಯಾವುದೇ ಮಾನ್ಯತೆ ನೀಡಿದಂತೆ ಕಂಡು ಬಂದಿಲ್ಲ, ನಮ್ಮ ಧರಣಿ ಸ್ಥಳಕ್ಕೆ ಶಾಸಕರು, ಸಂಸದರು, ಸಚಿವರು, ವಿವಿಧ ಪಕ್ಷದ ಮುಖಂಡರುಗಳು ಭೇಟಿ ನೀಡಿ ವಿಚಾರಿಸಿ ಹೋಗಿದ್ದಾರೆಯೇ ವಿನಹ ಯಾವುದೇ ಕಾರ್ಯವಾಗಿಲ್ಲ. ಸರಕಾರ ನಮ್ಮ ಬೇಡಿಕೆ ಈಡೇರಿಸುವ ಬದಲು ನಮ್ಮ ಧರಣಿಯನ್ನು ನಿರ್ಲಕ್ಷ ಮಾಡಿದೆ ಎಂದ ಅವರು ಇದೇ ರೀತಿಯ ವರ್ತನೆಯನ್ನು ತೋರಿದರೆ ನಾವು ಮುಂದೆ ನಡೆಸುವ ಉಗ್ರ ಹೋರಾಟಕ್ಕೆ ಸರಕಾರವೇ ಸಂಪೂರ್ಣ ಹೊಣೆ ಎಂದರು.

ಇದನ್ನೂ ಓದಿ : ರೋಹಿತ್ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರಿಗೆ ಸೂಕ್ತ ಪೊಲೀಸ್ ಭದ್ರತೆ; ಮನವಿ

Advertisement

ನಾವು ಸರಕಾರದ ಬಳಿ ಎಸ್ಸಿ ಪ್ರಮಾಣ ಪತ್ರವನ್ನು ಭಿಕ್ಷೆ ಎಂದು ಕೇಳುತ್ತಿಲ್ಲ. ಬದಲಾಗಿ ನಮಗೆ ಈ ಹಿಂದೆ ದೇವರಾಜು ಅರಸು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಸಮಾಜದ ಜನರ ಜೀವನ ಪರಿಸ್ಥಿತಿ ಮತ್ತು ಬಡತನವನ್ನು ನೋಡಿ ನೀಡಲಾಗಿದ್ದ ಪ್ರಮಾಣ ಪತ್ರವನ್ನು ಮುಂದುವರಿಸಿ ಎಂದು ಆಗ್ರಹಿಸುತ್ತಿದ್ದೇವೆ. ಯಾರೋ ಹೇಳಿದರು, ಒತ್ತಡ ಹಾಕಿದರು ಎಂದು ನಮಗೆ ನೀಡಿದ ಹಕ್ಕನ್ನು ಸರಕಾರ ಕಸಿದುಕೊಂಡಿರುವುದು ಸರಿಯಲ್ಲ. ಸಮಾಜ ಕಲ್ಯಾಣ ಸಚಿವರು ಬೆಂಗಳೂರಿನಲ್ಲಿ ಕರೆದ ಸಭೆಯಲ್ಲಿ ಮತ್ತೊಂದು ಮಹತ್ವ ಸಭೆ ನಡೆಸುವ ಬಗ್ಗೆ ತಿಳಿಸಿದ್ದರೂ ಇನ್ನೂ ಸಭೆ ಕರೆಯದೇ ಮುಂದಕ್ಕೆ ಹಾಕುತ್ತಿದ್ದಾರೆ. ಕೇಳಿದರೆ ನಾಲ್ಕು ದಿನ ತಡೆಯಿರಿ ಎಂದು ಹೇಳುತ್ತಿದ್ದಾರೆ. ಧರಣಿನಿರತ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳು ಹಾಗೂ ನಾವು ಭೇಟಿ ಮಾಡಿದ ಸಚಿವರು, ಶಾಸಕರೂ ಎಲ್ಲರೂ ಭರವಸೆ ನೀಡಿದ್ದರೂ ಇನ್ನೂ ಈಡೇರಿಸಿಲ್ಲ. ಸರಕಾರ ಮರ್ಯಾದೆಯಿಂದ ನಮ್ಮ ಹಕ್ಕನ್ನು ಮುಂದುವರಿಸಬೇಕು. ಸರಕಾರ ನಮ್ಮ ಸಮಾಜದ ಧರಣಿಯನ್ನು ಹಗುರವಾಗಿ ಪರಿಗಣಿಸಬಾರದು. ನಮ್ಮ ಧರಣಿ ಉಗ್ರ ಸ್ವರೂಪಕ್ಕೆ ತಿರುಗಿದರೆ ಅದಕ್ಕೆ ಅಧಿಕಾರಿಗಳು, ಸರಕಾರವೇ ಹೊಣೆಯಾಗಬೇದೀತು ಎಂದು ಎಚ್ಚರಿಸಿದರು. ‘

ರಾಜ್ಯ ಸರಕಾರಕ್ಕೆ ಸುಪ್ರೀಂ, ಹೈಕೋರ್ಟ ತೀರ್ಪು ಅನ್ವಯಿಸುವುದಿಲ್ಲವೇ? ಇದು ಬರೀ ಸಾರ್ವಜನಿಕರಿಷ್ಟೇ ಅನ್ವಯಿಸುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು ಇನ್ನಾದರೂ ಸರಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದರು. ಮುಖಂಡ ಭಾಸ್ಕರ ಮೊಗೇರ ಮುರ್ಡೇಶ್ವರ ಮಾತನಾಡಿ ನಮ್ಮ ತಾಳ್ಮೆಯನ್ನು ಸರಕಾರ ಪರೀಕ್ಷಿಸಬಾರದು. ಸಂವಿಧಾನಬದ್ಧವಾಗಿ ನೀಡಿರುವ ಹಕ್ಕನ್ನು ಸರಕಾರ ಕಿತ್ತುಕೊಂಡಿರುವುದು ಸರಿಯಲ್ಲ. ನಮ್ಮ ತೀವ್ರ ಸ್ವರೂಪದ ಹೋರಾಟದಿಂದಾಗುವ ಯಾವುದೇ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು. ಈ ಸಂದರ್ಭಲ್ಲಿ ಹಿರಿಯ ಮುಖಂಡ ಜಟಕಾ ಮೊಗೇರ, ಶ್ರೀಧರ ಮೊಗೇರ ಮುಂಡಳ್ಳಿ, ಸುಕ್ರಪ್ಪ ಮೊಗೇರ, ವೆಂಕಟ್ರಮಣ ಮೊಗೇರ, ಕೃಷ್ಣ ಮೊಗೇರ, ಈಶ್ವರ ಮೊಗೇರ, ಭಾಸ್ಕರ ಮೊಗೇರ ಬೆಳಕೆ ಸೇರಿದಂತೆ ಹಲವು ಮುಖಂಡರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next