ಭಟ್ಕಳ: ನಗರದ ರಾಷ್ಟ್ರೀಯ ಹೆದ್ದಾರಿಯ ಸರ್ಪನಕಟ್ಟೆಯ ಬಳಿಯಲ್ಲಿ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಲಾರಿಯು ಸರ್ಪನಕಟ್ಟೆಯ ಬಳಿಯಲ್ಲಿ ಪೊಲೀಸ್ ಚೆಕ್‍ಪೋಸ್ಟ್ ಸಮೀಪ ತಲುಪುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತೆನ್ನಲಾಗಿದೆ.
ಪೊಲೀಸ್ ಚೆಕ್ ಪೋಸ್ಟ್ ಬಳಿಯಲ್ಲಿ ಇಡಲಾಗಿದ್ದ ಬ್ಯಾರಿಕೇಡ್ ಕಂಡು ತಕ್ಷಣ ಬ್ರೇಕ್ ಹಾಕಿದ್ದರಿಂದ ಲಾರಿ ಮಗುಚಿದೆ ಎನ್ನುವ ಕುರಿತು ಪ್ರತ್ಯಕ್ಷ ದರ್ಶಿಗಳು ಕೆಲವರು ಹೇಳಿದರೆ, ಇನ್ನೂ ಕೆಲವರು ಲಾರಿಯಲ್ಲಿ ಓವರ್‍ಲೋಡ್ ಇದ್ದುದರಿಂದ ನಿಯಂತ್ರಣ ತಪ್ಪಿ ಮಗುಚಿದೆ ಎಂದು ಹೇಳುತ್ತಿದ್ದಾರೆ.
ಲಾರಿ ಮಗುಚಿ ಬೀಳಲು ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ. ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದರೆ, ಸಹಾಯಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಲಾರಿಯಲ್ಲಿದ್ದ ಕಟ್ಟಿಗೆಯು ರಸ್ತೆಯ ಮೇಲೆಯೇ ಬಿದ್ದಿದ್ದರಿಂದ ಸ್ವಲ್ಪ ಕಾಲ ಸಂಚಾರಕ್ಕೆ ವ್ಯತ್ಯಯವಾಯಿತು. ತಕ್ಷಣ ನಾಗರೀಕರು ಕಟ್ಟಿಗೆಯನ್ನು ತೆರವುಗೊಳಿಸಿದರು. ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ರಾಜ್ಯಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಉಪರಾಷ್ಟ್ರಪತಿ ನಾಯ್ಡು